ಮೈಸೂರು : ಆರ್ಥಿಕ ಇಲಾಖೆಯ ಅನುಮೋದನೆ ದೊರೆಯದ ಕಾರಣ, ಮೈಸೂರು ಮಹಾನಗರ ಪಾಲಿಕೆಯನ್ನು ಈ ಸಾಲಿಗೆ ಗ್ರೇಡ್-1 ಪಾಲಿಕೆಯಾಗಿಸುವ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ಮೈಸೂರನ್ನು ಬೆಂಗಳೂರಿನ ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು, ಈ ಸಂಬಂಧ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಹ ಹೆಚ್ಚು ಉತ್ಸಾಹ ತೋರಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಗ್ರೇಡ್-1 ಪಾಲಿಕೆ ರಚನೆಗೆ ಒಲವು ತೋರಿದ್ದರು. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಗೆ 5 ನಗರ ಸ್ಥಳೀಯ ಸಂಸ್ಥೆಗಳು ಮತ್ತು 7 ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸಿ ಗ್ರೇಡ್-1 ಮಹಾನಗರ ಪಾಲಿಕೆ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈಗ ಈ ಪ್ರಸ್ತಾವ ಮುಂದೂಡಲ್ಪಟ್ಟಿದೆ.
ರಾಜಧಾನಿ ಬೆಂಗಳೂರು ನಂತರ ಸಾಂಸ್ಕೃತಿಕ ನಗರಿ ಮೈಸೂರು ವೇಗವಾಗಿ ಬೆಳೆಯುತ್ತಿದ್ದು, ಅದನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕೆಂಬುದು ದಶಕದ ಕನಸಾಗಿತ್ತು. ಮೈಸೂರು-ಬೆಂಗಳೂರು ಹೈವೇ ರಸ್ತೆ, ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ, ಚಿತ್ರನಗರಿ ನಿರ್ಮಾಣ, ಪೆರಿಧಿಫೆರಲ್ ರಿಂಗ್ ರಸ್ತೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಂಗಣ ಸೇರಿದಂತೆ ನಾನಾ ಯೋಜನೆಗಳ ಅನುಷ್ಠಾನದಿಂದ ಈ ಚರ್ಚೆ ಮತ್ತಷ್ಟು ಜೋರಾಗಿತ್ತು.
ಮೈಸೂರಿನ ಹೊರವಲಯದ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ, ಕಡಕೊಳ ಪಟ್ಟಣ ಪಂಚಾಯಿತಿಯೊಂದಿಗೆ ಎಂಟು ಗ್ರಾಪಂಗಳನ್ನು ಸೇರಿಸಿಕೊಂಡು ಬೃಹತ್ ಪಾಲಿಕೆಯನ್ನಾಗಿ ರಚನೆ ಮಾಡಲು ಪ್ರಸ್ತಾವನೆ ತಯಾರಿಸಲಾಗಿತ್ತು. ಆದರೆ, ಮೈಸೂರು 20 ಲಕ್ಷ ಜನಸಂಖ್ಯೆ ಹೊಂದಿಲ್ಲದ ಕಾರಣ ಈ ಯೋಜನೆ ಸಾಕಾರಗೊಂಡಿರಲಿಲ್ಲ. ಈಗ ಗ್ರೇಡ್-1 ಪಾಲಿಕೆಯಾಗಿಸುವ ಯೋಜನೆಯೂ ಕೈಗೂಡದಂತಾಗಿದೆ.
ಪ್ರಮುಖ ಅಂಶಗಳು – ಮೈಸೂರು ಮಹಾನಗರ ಪಾಲಿಕೆ ಗ್ರೇಡ್-1 ಸ್ಥಾನಮಾನ ಪಡೆಯುವ ಯೋಜನೆ ಮುಂದೂಡಿಕೆ. ಆರ್ಥಿಕ ಇಲಾಖೆ ಅನುಮೋದನೆ ಮತ್ತು ಅನುದಾನ ಕೊರತೆ ಮುಖ್ಯ ಕಾರಣವಾಗಿದೆ. ಬೃಹತ್ ನಗರ ಪಾಲಿಕೆ ರಚನೆಗೆ 20 ಲಕ್ಷ ಜನಸಂಖ್ಯೆ ಅಗತ್ಯ, ಮೈಸೂರಿಗೆ ಕೊರತೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದರು. 5 ನಗರ ಸ್ಥಳೀಯ ಸಂಸ್ಥೆಗಳು ಮತ್ತು 7 ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆ. ಮೈಸೂರಿನ ಹೊರವಲಯದ ಹೂಟಗಳ್ಳಿ, ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ, ಕಡಕೊಳ ಸೇರ್ಪಡೆಯ ಪ್ರಸ್ತಾವನೆ ಹಿಂದೆಯೂ ವಿಫಲವಾಗಿತ್ತು.














