ಕಾಬೂಲ್: ಕೇಂದ್ರ ಕಾಬೂಲ್ ನ ಜನನಿಬಿಡ ಮಾರುಕಟ್ಟೆಯಲ್ಲಿ ಬುಧವಾರ ಗ್ರೆನೇಡ್ ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದಾರೆ.
ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಗಾನಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ.
ಇದು ಉದ್ದೇಶಿತ ದಾಳಿಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಗಾಯಗೊಂಡವರಲ್ಲಿ 3 ವರ್ಷದ ಬಾಲಕಿ ಹಾಗೂ 4 ವರ್ಷದ ಬಾಲಕನೂ ಇದ್ದಾರೆ. ವ್ಯಕ್ತಿಯೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದ ಆಡಳಿತವನ್ನು ತಾಲಿಬಾನ್ 2021ರಲ್ಲಿ ವಶಕ್ಕೆ ಪಡೆದ ಬಳಿಕ ಅಫ್ಗಾನಿಸ್ತಾನದಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗಿವೆ. ತಾಲಿಬಾನ್ ಹಾಗೂ ಶಿಯಾ ಸಮುದಾಯದವರನ್ನು ಗುರಿಯಾಗಿಸಿ ಆಗಾಗ್ಗೆ ದಾಳಿ ನಡೆಯುತ್ತಿರುತ್ತವೆ.