ಬೆಂಗಳೂರು: ಕಳೆದ 3 ತಿಂಗಳಲ್ಲಿ ರಾಜ್ಯದ ಸುಮಾರು 85 ಸಾವಿರ ಗ್ರಾಹಕರು ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಜ್ಯೋತಿ ಅಡಿ ನೀಡಲಾದ “ಡಿ-ಲಿಂಕ್’ ಸೌಲಭ್ಯ ಬಳಸಿಕೊಂಡು, ಹೊಸ ಬಾಡಿಗೆ ಮನೆಗಳ ಆರ್.ಆರ್. ಸಂಖ್ಯೆಯೊಂದಿಗೆ “ರಿ-ಲಿಂಕ್’ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ “ಗೃಹಜ್ಯೋತಿ’ಗೆ ಕಳೆದ ಆಗಸ್ಟ್ಗೆ ಒಂದು ವರ್ಷ ತುಂಬಿತು. ಈ ಸಂದರ್ಭದಲ್ಲಿ ಗ್ರಾಹಕರ ಮನವಿ ಮೇರೆಗೆ ಆರ್.ಆರ್. ನಂಬರ್ಗೆ ಜೋಡಣೆಯಾದ ತಮ್ಮ ಆಧಾರ್ ಸಂಖ್ಯೆಯನ್ನು “ಡಿ-ಲಿಂಕ್’ ಮಾಡಿಕೊಂಡು ತಾವು ತೆರಳುವ ಹೊಸ ಬಾಡಿಗೆ ಮನೆಗಳ ಆರ್.ಆರ್. ನಂಬರ್ನೊಂದಿಗೆ ಜೋಡಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರಕಿದ್ದು ನಿತ್ಯ ಸರಾಸರಿ ಒಂದು ಸಾವಿರ ಗ್ರಾಹಕರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಡಿ-ಲಿಂಕ್ ಸೌಲಭ್ಯ ಪಡೆದುಕೊಂಡವರಲ್ಲಿ ಶೇ. 73 ಗ್ರಾಹಕರು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ವ್ಯಾಪ್ತಿಯಲ್ಲೇ ಅದರಲ್ಲೂ ಬೆಂಗಳೂರು ನಗರದವರೇ ಆಗಿದ್ದಾರೆ. 62,444 ಗ್ರಾಹಕರು ಈ ಮೊದಲೇ ಆರ್.ಆರ್. ಸಂಖ್ಯೆ ಮತ್ತು ಆಧಾರ್ ಜೋಡಣೆಯನ್ನು “ಡಿ-ಲಿಂಕ್’ ಮಾಡಿ, ಹೊಸ ಬಾಡಿಗೆ ಮನೆಗಳ ಆರ್.ಆರ್. ಸಂಖ್ಯೆಯೊಂದಿಗೆ ಲಿಂಕ್ ಮಾಡಿಕೊಂಡಿದ್ದಾರೆ.
ಅದೇ ರೀತಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ (ಜೆಸ್ಕಾಂ)ನಲ್ಲಿ 6,742, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾಂ)ನಲ್ಲಿ 5,772 ಮತ್ತು ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ)ಯಲ್ಲಿ 4,519 ಗ್ರಾಹಕರು ಈ ಸೌಲಭ್ಯದ ಫಲಾನುಭವಿಗಳಾಗಿದ್ದಾರೆ. ತಮ್ಮ ಈ ಹಿಂದಿನ ಸರಾಸರಿಯನ್ನು ಮುಂದುವರಿಸಿಕೊಂಡು ಹೋಗಲು ಈ ಡಿ-ಲಿಂಕ್ ಪೂರಕವಾಗಿದೆ.