ಮನೆ ಮನೆ ಮದ್ದು ನೆಲ ಬೇವು

ನೆಲ ಬೇವು

0

ಕಹಿಗಳ ರಾಜ ಎಂದು ಕರೆಯಲ್ಪಡುವ ನೆಲಬೇವು ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ದತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರತದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹಿತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು (Kiratas) ಎಂಬ ಬುಡಕಟ್ಟು ಜನಾಂಗದವರಿಂದ ಜ್ವರಕ್ಕೆ ಔಷಧಿಯಾಗಿ ಬಳಸ ಲಾಗುತ್ತಿತ್ತು. ಆದ್ದರಿಂದ ಇದನ್ನು ಸಂಸ್ಕೃತದಲ್ಲಿ ಕಿರಾತ ತಿಕ್ತ, ಕಿರಾತ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಅಲ್ಲದೇ ಇದು ಅತ್ಯಂತ ಕಹಿಯಾಗಿರುವುದರಿಂದ ಮಹಾತಿಕ್ಕ ಎಂಬ ಹೆಸರೂ ಇದೆ.

Join Our Whatsapp Group

         ಮಲೇರಿಯಾ, ಸೊಳ್ಳೆಗಳಿಂದ ಹರಡುವಂತಹುದಾಗಿದ್ದು ನಿಂತ ನೀರಿನಲ್ಲಿ ಇದರ ವಂಶಾಭಿವೃದ್ಧಿ ಹೆಚ್ಚು, ಬ್ರಿಟಿಷರ ಕಾಲದಲ್ಲಿ ಇದನ್ನು ಕೆಸರು ಜ್ವರ ಎಂದು ಕರೆಯಲಾಗುತ್ತಿದ್ದು, ಅನೇಕ ಜನರನ್ನು ಬಲಿ ತೆಗೆದುಕೊಂಡಿತ್ತು. ಮಲೇರಿಯಾಕ್ಕೆ ನೆಲಬೇವು ಅತ್ಯುತ್ತಮ ಔಷಧಿ

 ಸಸ್ಯವರ್ಣನೆ

ನೆಲಬೇವು (ಆಂಡೋಗ್ರಾಫಿಸ್ ಪ್ಯಾನಿಕುಲೇಟ) ಆಕೇಂಥೇಸಿಯೆ ಕುಟುಂಬಕ್ಕೆ ಸೇರಿದ ಮುಖ್ಯ ಔಷಧಿ ಬೆಳೆ. ಇದು ನೇರವಾಗಿ ಬೆಳೆಯುವ ಗಿಡ ಪೂರ್ಣ ಬೆಳೆದ ಗಿಡಗಳು 30-100 ಸೆಂ.ಮೀ. ಎತ್ತರವಿರುತ್ತದೆ. ಕೊಂಬೆಗಳು ತೀಕ್ಷ್ಮವಾದ ಚೌಕಾಕಾರ ಹೊಂದಿ ಕೆಲವೊಮ್ಮೆ ಕಿರಿದಾದ ರೆಕ್ಕೆಗಳಂತೆ ಗಿಡದ ತುದಿಯ ಕಡೆಗೆ ಚುಚ್ಚಿರುತ್ತದೆ. ಎಲೆಗಳಿಗೆ ತೊಟ್ಟಿರುತ್ತದೆ. ಹೂಗಳು ಚಿಕ್ಕದಾಗಿದ್ದು ಅವು ಹೂಗೊಂಚಲಿನಲ್ಲಿ ಏಕಾಂತವಾಗಿರುತ್ತವೆ. ಹೂದಳಗಳು ಗುಲಾಬಿ ಬಣ್ಣವಿದ್ದು ಹೊರಭಾಗದಲ್ಲಿ ರೋಮಭರಿತವಾಗಿರುತ್ತದೆ. ಹಣ್ಣಿನ ಎರಡೂ ತುದಿಗಳು ಚೂಪಾಗಿ ಇರುತ್ತವೆ. ಬೀಜಗಳು ಬಹಳವಾಗಿದ್ದು ಅವುಗಳ ಬಣ್ಣ ಹಳದಿಯಿದ್ದು ಮೃದುವಾಗಿರುತ್ತದೆ.

 ಉಪಯುಕ್ತ ಭಾಗಗಳು

ನೆಲಬೇವಿನ ಪಂಚಾಂಗಗಳು ಅಂದರೆ ಬೇರು, ಕಾಂಡ, ಎಲೆ, ಹೂ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿವೆ.

 ರಾಸಾಯನಿಕ ಘಟಕಗಳು

          ಅಂಡೋಗ್ರಾಫೊಲೈಡ್ಸ್, ಆಂಡೋಗ್ರಾಫಿನ್, ಆಂಡೋಗ್ರಾಫಿನ್ ಎ, ಬಿ, ಸಿ, ಡಿ, ಇ ಮತ್ತು ಎಫ್. ಆಂಡೊಗ್ರಾಫೊಸೈಡ್, ಜರೊಕ್ಸೈಲಿನ್ ಎ. ವೊಗೊನಿನ್, ನಿಯೊಆಂಡ್ರೆ ಗಾಪೊಲೈಡ್, ಪೆನಿಕುಲೈಡ್.

 ಮಣ್ಣು

ನೆಲಬೇವು ಒಂದು ಗಡುತರ ಸಸ್ಯವಾಗಿರುವುದರಿಂದ ಇದನ್ನು ಹಲವಾರು ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಜೇಡಿಮಣ್ಣಿನಿಂದ ಹಿಡಿದು ಮರಳು ಮಿಶ್ರಿತ ಮಣ್ಣಿನಲ್ಲಿ ಮತ್ತು ಸಾವಯವ ಪದಾರ್ಥ ಹೊಂದಿದ ಮರಳು ಮಿಶ್ರಿತ ಜೇಡಿಮಣ್ಣು ಈ ಬೆಳೆಗೆ ಬಲು ಸೂಕ್ತವಾಗಿದೆ. ಹೆಚ್ಚು ನೀರು ನಿಲ್ಲುವ ಹಾಗೂ ಸಮಸ್ಯಾತ್ಮಕ ಮಣ್ಣುಗಳು ಈ ಬೆಳೆಗೆ ಸೂಕ್ತವಲ್ಲ

 ಹವಾಗುಣ

       ಈ ಬೆಳೆಯು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಂಪಾದ ಹವಾಗುಣವುಳ್ಳ, ಚೆನ್ನಾಗಿ ಮಳೆ ಹಂಚಿಕೆಯಾಗುವ ತೇವಭರಿತ ನೆರಳಿರುವ ಪ್ರದೇಶಗಳು ಸೂಕ್ತ.

 ಬೇಸಾಯ ಕ್ರಮಗಳು

       ನೆಲಬೇವನ್ನು ಬೀಜದಿಂದ ಅಥವಾ ಕಾಂಡದ ತುಂಡುಗಳಿಂದ ಅಭಿವೃದ್ಧಿ ಮಾಡಬಹುದು.

ಬೀಜವನ್ನು ನೇರವಾಗಿ ಬಿತ್ತನೆ ಮಾಡಬಹುದು ಅಥವಾ ಸಸಿಮಡಿಗಳಲ್ಲಿ ಸಸಿಗಳನ್ನು ಬೆಳೆಸಿ, ನಾಟಿ ಮಾಡಬಹುದು ಸಸಿಗಳನ್ನು ಪಾಲಿಥೀನ್ ಚೀಲಗಳಲ್ಲಿ 1:1:1 ರ ಪ್ರಮಾಣದಲ್ಲಿ ಮಣ್ಣು, ಮರಳು ಮತ್ತು ಗೊಬ್ಬರ ತುಂಬಿ ಬೆಳೆಸಬಹುದು ಅಥವಾ ಸಸಿಮಡಿಗಳನ್ನು ಮಾಡಿ ಬೆಳೆಸಬಹುದು. ಸಸಿಮಡಿಗಳನ್ನು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ (ಪ್ರತಿ ಚ.ಮೀ.ಗೆ 10 ಕೆ.ಜಿ.) ಹಾಕಿ 5 ಸೆಂ.ಮೀ. ಅಂತರದ ಸಾಲಿನಲ್ಲಿ ಬೀಜ ಬಿತ್ತಬೇಕು. ಬಿತ್ತನೆ ಮಾಡಿದ ಕೂಡಲೇ ಪಾಲಿಥೀನ್ ಚೀಲಗಳಿಗೆ ಅಥವಾ ಸಸಿಮಡಿಗಳಿಗೆ ನೀರು ಕೊಡಬೇಕು. ಆನಂತರ ಕೂಡ ನಿಗದಿತವಾಗಿ ನೀರು ಕೊಡಬೇಕು. ಬಿತ್ತನೆ ಬೀಜಗಳು 8-10 ದಿನಗಳಲ್ಲಿ ಮೊಳೆಯುತ್ತದೆ. ಸಸಿ ಮಡಿಗಳಲ್ಲಿ 45-60 ದಿನಗಳ ಕಾಲ ಬೆಳೆಸಿದ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.

 ಔಷಧೀಯ ಗುಣಗಳು

★ಜ್ವರ : ಯಾವುದೇ ಬಗೆಯ ಜ್ವರವಿರಲಿ ನೆಲಬೇವಿನ ಕಷಾಯ ತಯಾರಿಸಿ ಕುಡಿಯುವುದರಿಂದ ವಾಸಿಯಾಗುತ್ತದೆ. ಮಲೇರಿಯಾ, ಟೈಫಾಯ್ಡ್ ಮತ್ತು ಯಾವುದೇ ದೀರ್ಘಕಾಲೀನ ಜ್ವರದಲ್ಲಿಯೂ ನೆಲಬೇವು ತುಂಬಾ ಉಪಯುಕ್ತವಾದುದು.

      ಆಯುರ್ವೇದ ವೈದ್ಯರು ಜ್ವರಕ್ಕಾಗಿ ಉಪಯೋಗಿಸುವ ಸುದರ್ಶನ ಚೂರ್ಣದಲ್ಲಿ ನೆಲಬೇವು ಮುಖ್ಯವಾದ ಅಂಶವಾಗಿದೆ.

★ಕಾಲರಾ : ನೆಲಬೇವಿನ ಎಲೆಗಳ ರಸದೊಂದಿಗೆ ಬೇವು ಮತ್ತು ಅಮೃತಬಳ್ಳಿ ಎಲೆಗಳ ರಸವನ್ನು ಸಮಭಾಗ ತೆಗೆದುಕೊಂಡು ಅದಕ್ಕೆ ಜೇನು ಬೆರೆಸಿ ಕುಡಿಯುವುದರಿಂದ ಕಾಲರಾ ನಿಯಂತ್ರಣಕ್ಕೆ ಬರುತ್ತದೆ.

★ ಜಂತುಹುಳುವಿನ ತೊಂದರೆಯಿದ್ದಲ್ಲಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ಏಳುದಿನಗಳ ಕಾಲ ನೆಲಬೇವಿನ ಕಷಾಯ ಕುಡಿಯಬೇಕು.

★ ಚರ್ಮರೋಗಗಳಲ್ಲಿ ನೆಲಬೇವನ್ನು ಕಾಳುಮೆಣಸು ಮತ್ತು ಎಳ್ಳೆಣ್ಣೆ ಅರೆದು ಚಟ್ನಿಯಂತೆ ಮಾಡಿ ಲೇಪಿಸುವುದರಿಂದ ನಾವೆ ಮತ್ತು ಉರಿ ಕಡಿಮೆಯಾಗುತ್ತದೆ ಅಲ್ಲದೇ ನೆಲಬೇವಿನ  ಕಾಷಾಯವನ್ನು ಕುಡಿಯುವುದರಿಂದ ಬೇಗನೆ ವಾಸಿಯಾಗುತ್ತದೆ.

★ ಊತ ದೇಹದ ಯಾವುದೇ ಭಾಗದಲ್ಲಿ ಊತವಿದ್ದಲ್ಲಿ ನೆಲಬೇವನ್ನು ಒಣಗಿಸಿ ಪುಡಿ ಮಾಡಿ ಆದಕ್ಕೆ ಒಂದು ಚಿಟಿಕೆ ಒಣ ಶುಂಠಿ ಪುಡಿ ಬೆರೆಸಿ ಅಕ್ಕಿ ಕಚ್ಚಿನಲ್ಲಿ ಅಕ್ಕಿ ತೊಳೆದ ನೀರು ಅನ್ನಕ್ಕಿಡುವ ಮುಂಚೆ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುತ್ತದೆ.

೨ ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ನೆಲಬೇವಿನ ಕಷಾಯ ಕುಡಿಸಬೇಕು. ನೆಲಬೇವಿನ ಕಷಾಯಕ್ಕೆ ಜೇನು ಬೆರೆಸಿ ಕುಡಿಸಬಹುದು.

೨ ಬಾಯಿಹುಣ್ಣಿನ ತೊಂದರೆಯಿಂದ ಬಳಲುವವರು ನೆಲಬೇವಿನ ಕಾಂಡವನ್ನು ಒಂದು ರಾತಿ ಮಜ್ಜಿಗೆಯಲ್ಲಿ ನೆನೆಯಿಟ್ಟು ನಂತರ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಚಮಚೆಯನ್ನು ತೆಗೆದುಕೊಂಡು ತುಪ್ಪದಲ್ಲಿ ಹುರಿದು ಊಟ ಮಾಡುವಾಗ ಅನ್ನದೊಂದಿಗೆ ಬೆರೆಸಿ ತಿನ್ನಬೇಕು.

,★ ಕಾಮಾಲೆ ಮತ್ತು ಇತರ ಯಕೃತ್ತಿನ ತೊಂದರೆಗಳಿಂದ ಬಳಲುವವರಿಗೆ ನೆಲಬೇವಿನ ಇಡೀ ಗಿಡದ ಕಷಾಯ ತುಂಬ ಉಪಯುಕ್ತ ದಿನಕ್ಕೆರಡು ಬಾರಿ ಬೆಳಗ್ಗೆ ಮತ್ತು ರಾತ್ರಿ ಊಟಕ್ಕೆ ಮುಂಚೆ ಕಷಾಯ ಕುಡಿಯಬೇಕು.

★ ಹೊಟ್ಟೆನೋವು, ಭೇದಿ, ಹಸಿವೆಯಿಲ್ಲದಿರುವುದು ಮುಂತಾದ ತೊಂದರೆಗಳಲ್ಲಿ ನೆಲಬೇವಿನ ಎಲೆಯ ರಸವನ್ನು ಏಲಕ್ಕಿ ಲವಂಗ ಮತ್ತು ದಾಲ್ಚಿನ್ನಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಬೆರೆಸಿ ಸೇವಿಸಬೇಕು.

★ ಶಕ್ತಿವರ್ಧಕ : ದೊಡ್ಡವರಲ್ಲಿ ಮತ್ತು ಮಕ್ಕಳಲ್ಲಿ ನಿಶ್ಯಕ್ತತೆಯಿದ್ದು ಹಸಿವೆಯಿಲ್ಲದಿದ್ದಲ್ಲಿ ಕೇವಲ ನೆಲಬೇವಿನ ಕಷಾಯ ಅಥವಾ ನೆಲಬೇವಿನ ಕಷಾಯವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸುವುದರಿಂದ ನಿಶ್ಯಕ್ತಿ ದೂರವಾಗುವುದಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ನೆಲಬೇವು ಶಕ್ತಿವರ್ಧಕ ಟಾನಿಕ್ ನಂತೆ ಕಾರ್ಯನಿರ್ವಹಿಸುತ್ತದೆ.

★ ಹಾವುಡಿತದಲ್ಲಿಯೂ ನೆಲಬೇವಿನ ಕಷಾಯ ತುಂಬ ಉಪಯುಕ್ತ ಇದು ವಿಷಹರವಾಗಿ ಕೆಲಸ ಮಾಡುತ್ತದೆ.

★ ಅತಿರಕ್ತಸ್ರಾವ : ಸ್ತ್ರೀಯರಲ್ಲಿ ಮಾಸಿಕ ಸ್ರಾವವು ಅಧಿಕವಾಗುತ್ತಿದ್ದಲ್ಲಿ ನೆಲಬೇವಿನ ಕಷಾಯ ಮತ್ತು ಶ್ರೀಗಂಧದ ಕಷಾಯವನ್ನು ದಿನಕ್ಕೆ ಮೂರುಬಾರಿ ಕುಡಿಯಬೇಕು.

★ ಕಾಮಾಲೆ ಮತ್ತು ಯಕೃತ್ತಿನ ಇತರ ತೊಂದರೆಗಳಲ್ಲಿ ನೆಲಬೇವಿನ ಸಮಗ್ರ ಗಿಡವನ್ನು ತೊಳೆದು ಸ್ವಚ್ಛಗೊಳಿಸಿ ನುಣ್ಣಗೆ ರುಬ್ಬಿ ರಸ ತೆಗೆದುಕೊಳ್ಳಬೇಕು. ಈ ರಸವನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಎರಡರಿಂದ ನಾಲ್ಕು ಚಮಚೆಯಷ್ಟನ್ನು ಜೇನಿನೊಂದಿಗೆ ಬೆರೆಸಿ ಕುಡಿಯಬೇಕು.

★ ಸಕ್ಕರೆ ಕಾಯಿಲೆಯಿಂದ ಬಳಲುವವರು : ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ಹಾಗೆಯೇ ತಿನ್ನಬಹುದು ಇಲ್ಲವೇ ನೆಲಬೇವಿನ ರಸ ಅಥವಾ ಕಷಾಯ ಸೇವನೆ ಮಾಡಿದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.

★ ಅರ್ಧ ತಲೆನೋವು : ನೆಲಬೇವು, ಅಮೃತಬಳ್ಳಿ, ಬೇವಿನ ತೊಗಟೆ, ಅರಿಶಿನ ಸಮವಾಗಿ ಬೆರೆಸಿ ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಕುಡಿಯಬೇಕು ಅಲ್ಲದೇ ಈ ಕಷಾಯವನ್ನು ಮೂಗಿನಲ್ಲಿ ನಶ್ಯದಂತೆ ನಿಧಾನವಾಗಿ ಏರಿಸಬೇಕು ಕಫ ಕಟ್ಟಿಕೊಂಡು ತಲೆನೋವು ಉಂಟಾಗಿದ್ದಲ್ಲಿ ಸೀನುಗಳು ಬಂದು ಕಥೆ ಕರಗಿ ನೋವು ಕಡಿಮೆಯಾಗುವುದು.

★ಎದೆಯುರಿ, ತಲೆಸುತ್ತು ಇದ್ದಲ್ಲಿ ಕಾಲು ಚಮಚೆ ಒಣಗಿದ ನೆಲಬೇವಿನ ನಯವಾದ ಪುಡಿಗೆ ಸಕ್ಕರೆ ಇಲ್ಲವೇ ಜೇನುತುಪ್ಪ ಬೆರೆಸಿ ಸೇವಿಸಬೇಕು.

 ಔಷಧಿ ಪ್ರಮಾಣ

ಕಷಾಯ : ದೊಡ್ಡವರಿಗೆ ನಾಲ್ಕರಿಂದ ಆರು ಚಮಚೆ, ಮಕ್ಕಳಿಗೆ ಜೇನುತುಪ್ಪದೊಂದಿಗೆ ಕೊಡಬೇಕು.

1ರಿಂದ 6 ವರ್ಷ – 1ರಿಂದ 2 ಚಮಚೆ

6ರಿಂದ 12 ವರ್ಷ 2ರಿಂದ 4 ಚಮಚ.

ಎಲೆಯ ರಸ: ದೊಡ್ಡವರಿಗೆ ಎರಡರಿಂದ ನಾಲ್ಕು ಚಮಚೆ,

ಮಕ್ಕಳಿಗೆ ಜೇನುತುಪ್ಪ ದೊಂದಿಗೆ ಕೊಡಬೇಕು. 1ರಿಂದ 6 ವರ್ಷ-1/2 ದಿಂದ 1 ಚಮಚ.

6ರಿಂದ 12 ವರ್ಷ – 1ರಿಂದ 2 ಚಮಚಿ.

 ಇತರ ಭಾಷೆಗಳಲ್ಲಿ

ಸಂಸ್ಕೃತ —ಭೂನಿಂಬ, ಚಿರಾಯತ, ಕಿರಾತತಿಕ್ತ, ಮಹಾತಿಕ್ತ, ತಿಕ್ತ, ಅನಾರ್ಯತಿಕ್ತ

ಚಿರಾಯತ

ಮರಾಠಿ —ಕಿರಾಯಿತ್, ಕಡೆ ಚಿರಾಯಿತ್

ತಮಿಳು —ಶಿರತ್‌ಕುಚ್ಚಿ, ಚಿರಾಯತು

ತೆಲುಗು—ನೆಲವೇಮು

 ಇಂಗ್ಲಿಷ್  —Chiretta, King of Bitters

ವೈಜ್ಞಾನಿಕ ಹೆಸರು — Andrographis paniculata (N. Burman) Wall. ex nees.