ಮೈಸೂರು: ಭಾರತದ 75 ವರ್ಷಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬೆಂಗಳೂರಿನ ಕೇಂದ್ರೀಯ ಅಂತರ್ಜಲ ಮಂಡಳಿ ಹಾಗೂ ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದೊಂದಿಗೆ ನಗರದ ANSSIRD ಸಂಸ್ಥೆಯಲ್ಲಿ ‘ಅಂತರ್ಜಲ ಸಂಪನ್ಮೂಲಗಳ ಸುಸ್ಥಿರತೆ’ ಕುರಿತು ಜೂ. 15 ರಿಂದ 17 ರ ವರೆಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ ಜರುಗಿತು.
ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕರಾದ ಎನ್.ಜ್ಯೋತಿ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರ್ಜಲ ಹೊರತೆಗೆಯುವಿಕೆಯಲ್ಲಿ ತಾಲ್ಲೂಕುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಅದರ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತರಬೇತಿಯಲ್ಲಿ ತಾಂತ್ರಿಕ ವಿಚಾರ ವಿನಿಮಯ ನಡೆಯಿತು. ಅದರಲ್ಲಿ, ಕೇಂದ್ರೀಯ ಅಂತರ್ಜಲ ಮಂಡಳಿಯ ವಿಜ್ಞಾನಿಗಳು, ಅಂತರ್ಜಲ ಮೂಲಗಳ ಸುಸ್ಥಿರತೆಯ ಬಗ್ಗೆ ವಿಶಾಲವಾದ ರೂಪುರೇಷೆಗಳನ್ನು ಪ್ರಸ್ತುತಪಡಿಸಿದರು. ಮೈಸೂರು ತಾಲ್ಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿ ನಿರ್ಮಿಸಿರುವ ಮಾನವ ನಿರ್ಮಿತ ನೀರಿನ ಮರುಪೂರಣ ರಚನೆಗಳನ್ನು ವೀಕ್ಷಿಸಿ, ಅದರ ಸಂಪೂರ್ಣ ಮಾಹಿತಿಯನ್ನು ಅಲ್ಲಿನ ಸ್ಥಳೀಯರಿಂದ ಪಡೆದುಕೊಂಡರು.
ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಉಪ ನಿರ್ದೇಶಕರಾದ ಮನೋಜ್ ಕುಮಾರ್ ಕೆ.ಎಸ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂತರ್ಜಲ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿ ವಿಜ್ಞಾನಿಗಳಾದ ಎ.ಶಕ್ತಿವೇಲ್, ಶ್ರೀಹರಿ ಸಾರಂಗನ್, ಅನಿಶಾ, ಡಾ.ಲುಬ್ಸಾ ಕೌಸರ್ , ಡಾ.ಬೇಬಿ ಶ್ವೇತ ಮತ್ತು ನಿವೃತ್ತ ವಿಜ್ಞಾನಿ ಸತ್ಯನಾರಾಯಣ್ ಹಾಗೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಒಟ್ಟು 50 ಅಧಿಕಾರಿಗಳು ಭಾಗವಹಿಸಿದ್ದರು.