ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಅಂತರ ಕಾಲೇಜುಗಳ ಮಹಿಳಾ(ಬೆಂಗಳೂರು ವಿಭಾಗ ಹೊರತುಪಡಿಸಿ) ಕಬಡ್ಡಿ ಟೂರ್ನಿಯಲ್ಲಿ ಮೈಸೂರಿನ ಜಿಎಸ್ ಎಸ್ ಎಸ್ ಕಾಲೇಜು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಜನತಾ ಶಿಕ್ಷಣ ಟ್ರಸ್ಟ್, ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐದು ಅಂಕದ ಅಂತರದೊಂದಿಗೆ ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜನ್ನು ಮಣಿಸಿತು.
ಮೈಸೂರು ತಂಡ 27 ಹಾಗೂ ಮಂಗಳೂರು ತಂಡ 22 ಅಂಕ ಗಳಿಸಿತು. ಇನ್ನು ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಮಣಿಸಿದ ಅತಿಥೇಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು. ಈ ನಾಲ್ಕು ತಂಡ ಆ.2ರಿಂದ ಚಿಕ್ಕಬಳ್ಳಾಪುರದಲ್ಲಿ ನಡೆಯುವ ರಾಜ್ಯಮಟ್ಟದ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.
ಪೊನ್ನಂಪೇಟೆ ಸಿಐಟಿ, ಮೈಸೂರು ಎನ್ ಐಇಐಟಿ, ಹುಬ್ಬಳ್ಳಿ ಎಜಿಎಂಆರ್, ಮಂಗಳೂರು ಎಸ್ ಐಟಿ, ಮೈಸೂರಿನ ಎನ್ ಐಇ, ಹುಬ್ಬಳ್ಳಿ ಕೆಎಲ್ಇಐಟಿ ಸೇರಿ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
ವಿಜೇತ ತಂಡಕ್ಕೆ ಪಿಇಎಸ್ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಕಾರ್ಯದರ್ಶಿ ಶಿವಪ್ರಸಾದ್ ಬಹುಮಾನ ವಿತರಿಸಿದರು.














