ಮೈಸೂರು(Mysuru) : ತಡವಾದ ಮುಂಗಾರು ಹಂಗಾಮಿಗೆ ಭತ್ತದ ಬಿತ್ತನೆ ಬೀಜ ಅವಶ್ಯಕತೆ ಇದ್ದು ಒದಗಿಸಿಕೊಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಲ್ಲಿ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.
ತಾಲ್ಲೂಕ್ಕಿನ ನಾಗನಹಳ್ಳಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇಂದು ನಡೆದ ಜಂಟಿ ಕೃಷಿ ನಿರ್ದೇಶಕರವ(ಜಾಗೃತಿ ಕೋಶ) ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಜಿ.ಟಿ.ದೇವೇಗೌಡ ಅವರು, ಮೈಸೂರು ತಾಲ್ಲೂಕಿನಲ್ಲಿ ತಡವಾದ ಮುಂಗಾರು ಹಂಗಾಮಿಗೆ ಭತ್ತದ ಬಿತ್ತನೆ ಬೀಜ ಒದಗಿಸುವಂತೆ ರೈತರು ಹಲವಾರು ಬಾರಿ ನನಗೆ ಮನವಿಯನ್ನು ಸಲ್ಲಿಸಿದ್ದರು. ಆದ್ದರಿಂದ ಕೃಷಿ ಸಚಿವರು ಮೈಸೂರಿನಲ್ಲಿ ನನ್ನ ಕ್ಷೇತ್ರಕ್ಕೆ ಬಂದಿರುವುದರಿಂದ ಅವರಲ್ಲಿ ಇಲ್ಲಿಯೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ರೈತರ ಬೇಡಿಕೆಗೆ ಅನುಗುಣವಾಗಿ ಚಾಮುಂಡೇಶ್ವರಿ ಕ್ಷೇತ್ರದ ರೈತರಿಗೆ ಸುಮಾರು 870 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ ರೈತರಿಗೆ ಅವಶ್ಯಕತೆ ಇರುವ JR-64 Jyothi, MTU-1001, MTU-1010, Jaya, JGL-1798, RNR-15048, Thank, BR-2655, DRH-836 ಭತ್ತದ ಬಿತ್ತನೆ ಬೀಜವನ್ನು ಒದಗಿಸುವಂತೆ ಕೋರಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಿ.ಪಂ.ಮಾಜಿ ಸದಸ್ಯರಾದ ದಿನೇಶ್, ನಾಗನಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ಹಾಗೂ ಹಲವಾರು ಮುಖಂಡರು ಹಾಜರಿದ್ದರು.