ನಂಜನಗೂಡು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು, ಬಡವರು ಬದುಕು ಕಟ್ಟಿಕೊಳ್ಳಲು ನೆರವಾಗಿವೆ, ಅಲ್ಲದೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಅವರು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಹುಲ್ಲಹಳ್ಳಿ ಹೋಬಳಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುಂದು ಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ, ಅಲ್ಲದೆ ಗ್ಯಾರಂಟಿ ಯೋಜನೆಗಳು ಯಾರಿಗೂ ಸರಿಯಾಗಿ ತಲುಪುತ್ತಿಲ್ಲ ಎಂದು ವಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟು, ಸಂವಿಧಾನಾತ್ಮಕವಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚಿಸಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದ ಜೊತೆಗೆ ಎಲ್ಲಾ ಕ್ಷೇತ್ರಗಳಿಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದಾರೆ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದರು.
ನಂಜನಗೂಡು ತಾಲೂಕಿಗೆ ಯುವನಿಧಿ ಯೋಜನೆಯಿಂದ 901 ವಿದ್ಯಾರ್ಥಿಗಳಿಗೆ 26 ಲಕ್ಷದ 82 ಸಾವಿರ ಅನುದಾನ ಬಂದಿದೆ, ಶಕ್ತಿ ಯೋಜನೆಗೆ 77 ಕೋಟಿ, ಗೃಹ ಜ್ಯೋತಿ ಯೋಜನೆಗೆ 9 ಕೋಟಿ 84 ಲಕ್ಷ 48 ಸಾವಿರ, ಅನ್ನಭಾಗ್ಯ ಯೋಜನೆಗೆ ಒಂದು ಕೋಟಿ 66 ಲಕ್ಷ ಅನುದಾನವನ್ನು ನೀಡಲಾಗಿದೆ, ನಂಜನಗೂಡು ಕ್ಷೇತ್ರಕ್ಕೆ ಸುಮಾರು 160 ಕೋಟಿ ಅನುದಾನ ಬಂದಿದೆ. ವಾರ್ಷಿಕವಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಕೂಡ ಪ್ರತಿಕ್ಷೇತ್ರಕ್ಕೆ ಸುಮಾರು 160 ಕೋಟಿ ರೂಗಳನ್ನು ಗ್ಯಾರೆಂಟಿ ಯೋಜನೆಗಳಿಗಾಗಿ ಅನುದಾನ ತಲುಪುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹುಲ್ಲಹಳ್ಳಿ ಪಡಿತರ ವಿತರಣ ಕೇಂದ್ರದಲ್ಲಿ 10 ಕೆಜಿ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಜೊತೆಗೆ ಹುಲ್ಲಹಳ್ಳಿ ಯಿಂದ ಮಡಕೆಹುಂಡಿ ಮಾರ್ಗ, ಹುಲ್ಲಹಳ್ಳಿ ಯಿಂದ ಬಸಾಪುರ- ಲಂಕೆ ಮಾರ್ಗ, ಹುಲ್ಲಹಳ್ಳಿ ಯಿಂದ ಹುರ ಮಾರ್ಗವಾಗಿ ಮಲ್ಲಹಳ್ಳಿಗೆ ತಲುಪುವ ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿದರು.
ಗ್ಯಾರೆಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಮಾರುತಿ ಮಾತನಾಡಿ ಗ್ರಾಮಸ್ಥರ ಬೇಡಿಕೆಯಂತೆ ಹೊಸದಾಗಿ ಹುಲ್ಲಹಳ್ಳಿಯಿಂದ ಮೂರು ಮಾರ್ಗದಲ್ಲಿ ಬಸ್ಸು ಸಂಚಾರವನ್ನು ಆರಂಭಿಸಲಾಗಿದೆ, ಅಲ್ಲದೆ ಶಾಸಕ ದರ್ಶನ್ ಧ್ರುವನಾರಾಯಣ್ ರವರ ಸಲಹೆ ಮೇರೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುಂದು ಕೊರತೆಯ ಸಭೆಯನ್ನು ಹೋಬಳಿ ಹಂತದಲ್ಲಿ ಆ ಯೋಜನೆ ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಜನರಿಗೆ ಅರಿವು ಮೂಡಿಸುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸಲಾಗುವುದು, ಅಲ್ಲದೆ ಪಂಚ ಗ್ಯಾರೆಂಟಿ ರಥವನ್ನು ತಾಲೂಕಿನ ಪ್ರತಿ ಗ್ರಾಮದಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು.
ಸಮಾರಂಭದಲ್ಲಿ ಫಲಾನುಭವಿ ಕಳಲೆ ಗ್ರಾಮದ ನಾಗರತ್ನ ಮಾತನಾಡಿ ಗೃಹಲಕ್ಷ್ಮಿ ಹಣದಿಂದ ನಾನು ಹೊಸದಾಗಿ ಟೈಲರಿಂಗ್ ಸ್ವಂತ ಉದ್ದಿಮೆಯನ್ನು ಆರಂಭಿಸಿ ಹೆಚ್ಚಿನ ಲಾಭವನ್ನು ಗಳಿಸುತ್ತಿದ್ದೇನೆ. ಈ ಗೃಹಲಕ್ಷ್ಮಿ ಹಣದಿಂದ ವಯಸ್ಸಾದ ತಂದೆ ತಾಯಿಗಳಿಗೆ ಜೀವನ ನಿರ್ವಹಣೆಗೆ ಅನುಕೂಲವಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ರಾಂಪುರ ಗ್ರಾಮದ ಮಂಜುಳಾ ಮಾತನಾಡಿ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಶೌಚಾಲಯ ನಿರ್ಮಿಸಿಕೊಂಡಿದ್ದೇನೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಮಾದಪ್ಪ, ಗ್ರಾಪಂ ಉಪಾಧ್ಯಕ್ಷ ಲೋಕೇಶ್, ಗ್ರಾಪಂ ಸದಸ್ಯರಾದ ಅನ್ಸರ್ ಅಹಮದ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಡ್ಯ ಜಯರಾಮ, ಹಾಡ್ಯ ಗ್ರಾಪಂ ಅಧ್ಯಕ್ಷ ಹರೀಶ್, ತಾಪಂ ಮಾಜಿ ಸದಸ್ಯರಾದ ಚಾಮರಾಜು, ಗೋವಿಂದರಾಜು, ಮುಖಂಡರಾದ ಅಭಿನಂದನ್ ಪಟೇಲ್, ಸತೀಶ್, ಶಿವನಾಗಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಶೋಕ್, ಪರ್ವೀಜ್, ಜಮುನಾ, ಸುಕುಮಾರ್, ಪ್ರಭುಸ್ವಾಮಿ, ಮುದ್ದುರಾಮ, ವೆಂಕಟೇಶ್, ತಾಪಂ ಇಒ ಜರಾಲ್ಡ್ ರಾಜೇಶ್, ಸಿಡಿಪಿಓಗಳಾದ ಭವ್ಯಶ್ರೀ, ಮಂಜುಳಾ, ಚೆಸ್ಕಾಂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ದೇವರಾಜಯ್ಯ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.














