ಮನೆ ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ತನಕ ಗ್ಯಾರಂಟಿ ರದ್ದಾಗದು: ಲಕ್ಷ್ಮಿ ಹೆಬ್ಬಾಳ್ಕರ್

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ತನಕ ಗ್ಯಾರಂಟಿ ರದ್ದಾಗದು: ಲಕ್ಷ್ಮಿ ಹೆಬ್ಬಾಳ್ಕರ್

0

ಬೆಂಗಳೂರು: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅಭಾದಿತವಾಗಿದ್ದು, ನಿರಂತರವಾಗಿರುತ್ತದೆ. ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರದಲ್ಲಿರುವ ತನಕ ಯೋಜನೆ ರದ್ದಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ “ಗ್ಯಾರಂಟಿ” ಭರವಸೆ ನೀಡಿದ್ದಾರೆ.

Join Our Whatsapp Group

ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಂಡ ಬಳಿಕ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಯಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

“ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಇರುವುದೇ ಬಡ ವರ್ಗದವರಿಗಾಗಿ. ಪಕ್ಷಾತೀತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕುಟುಂಬದ ಯಜಮಾನಿಯರ ಖಾತೆಗೆ ಹಾಕಲಾಗುತ್ತಿದೆ. ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮಿ ಹಣ ಹಾಕಲಾಗುತ್ತದೆ ಎನ್ನುವ ಆರೋಪ ಶುದ್ಧ ಸುಳ್ಳು. ಇದು ಆಧಾರ‌ರಹಿತ” ಎಂದು ಹೇಳಿದರು.

“ಜಿಎಸ್ಟಿ, ಜಿಎಸ್ಟಿಯೇತರ, ಆದಾಯ ತೆರಿಗೆ ಹೀಗೆ ಫಲಾನುಭವಿಗಳನ್ನು ವಿಂಗಡಿಸಲಾಗಿದೆ. ಈಗಾಗಲೇ ನವೆಂಬರ್, ಡಿಸೆಂಬರ್ ತಿಂಗಳ ಬಿಲ್ ಆಗಿದ್ದು, ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ. ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಚುನಾವಣೆಗೋಸ್ಕರ ಮಾಡಿರುವ ಯೋಜನೆಯಲ್ಲ. ಚುನಾವಣೆ ಮುಗಿದ ಬಳಿಕವೂ ಮುಂದುವರಿದಿವೆ” ಎಂದು ತಿಳಿಸಿದರು.

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ: “ರಾಜ್ಯದಲ್ಲಿ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸುವಾಗ ಬಿಜೆಪಿಯವರು ಏನೆಲ್ಲ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜ್ಯಪಾಲರ ಭಾಷಣವನ್ನು ಟೀಕಿಸುವುದಕ್ಕೂ ಮುನ್ನ ಬಿಜೆಪಿಯವರು ಮೊದಲು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು” ಎಂದು ತೀಕ್ಷ್ಣ ತಿರುಗೇಟು ಕೊಟ್ಟರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣದ ಬಗ್ಗೆ ಬಿಜೆಪಿ ನಾಯಕರ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, “ಬಿಜೆಪಿಯವರ ಆಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಎನ್ನುವುದನ್ನು ಅವರು ಮೊದಲು ಅವಲೋಕನ ಮಾಡಿಕೊಳ್ಳಲಿ” ಎಂದರು.

ಎಥಿಕ್ಸ್ ಕಮಿಟಿ ಬಗ್ಗೆ ಗೊತ್ತಿಲ್ಲ: ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಮ್ಮ ವಿರುದ್ಧ ಬಳಸಿದ ಅಶ್ಲೀಲ ಪದ ಪ್ರಯೋಗ ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, “ನಾನು ಇಂದು ಬೆಂಗಳೂರಿಗೆ ಬಂದಿದ್ದು, ಮಾಧ್ಯಮದವರಿಗೆ ಎಷ್ಟು ಮಾಹಿತಿ ಇದೆಯೋ, ಅಷ್ಟೇ ಮಾಹಿತಿ ನನಗೂ ಇದೆ. ಎಥಿಕ್ಸ್ ಕಮಿಟಿಗೆ ನೀಡಿರುವ ವಿಚಾರ ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.

“ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆ ವೇಳೆಯಲ್ಲೂ ಪ್ರಕರಣದ ಬಗ್ಗೆ ಏನೂ ಮಾತನಾಡಲಿಲ್ಲ. ಈ ರೀತಿ ಯಾರಿಗೂ ಆಗಬಾರದೆನ್ನುವುದೇ ನನ್ನ ಕಳಕಳಿ” ಎಂದರು.

ಲೈಂಗಿಕ ದೌರ್ಜನ್ಯ- ಶಿಕ್ಷಕನ ವಿರುದ್ಧ ಕಠಿಣ ಕ್ರಮ: “ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಶಾಲೆಯ ಶಿಕ್ಷಕನೋರ್ವ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವರದಿ ಗಮನಕ್ಕೆ ಬಂದಿದೆ. ಈ ಬಗ್ಗೆ ಖಂಡಿತವಾಗಿಯೂ ರಾಜ್ಯ ಸರ್ಕಾರವು ಮಕ್ಕಳ ಹಾಗೂ ಪೋಷಕರ ಪರ ನಿಲ್ಲುತ್ತದೆ. ಲೈಂಗಿಕ ದೌರ್ಜನ್ಯದ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಈ ಪ್ರಕರಣದಲ್ಲಿ ದೂರು ದಾಖಲಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು. ಈ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆಯೂ ತಿಳಿಸಲಾಗಿದೆ” ಎಂದು ಸಚಿವೆ ಇದೇ ಸಂದರ್ಭದಲ್ಲಿ ತಿಳಿಸಿದರು.