ಮನೆ ಕಾನೂನು ಸಾಮಾಜಿಕ ಮಾಧ್ಯಮ ಖಾತೆಗಳ ಶಾಶ್ವತ ಅಮಾನತು ಮಾರ್ಗಸೂಚಿ ಬರಲಿದೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

ಸಾಮಾಜಿಕ ಮಾಧ್ಯಮ ಖಾತೆಗಳ ಶಾಶ್ವತ ಅಮಾನತು ಮಾರ್ಗಸೂಚಿ ಬರಲಿದೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

0

ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಬಳಕೆದಾರರನ್ನು ಅಮಾನತು ಮಾಡುವ ಅಥವಾ ಶಾಶ್ವತವಾಗಿ ನಿಷೇಧಿಸುವ ಕುರಿತು ಮಾರ್ಗಸೂಚಿಗಳು ಭವಿಷ್ಯದಲ್ಲಿ ಎಂದಾದರೊಂದು ದಿನ ಬರಲಿದೆ ಹಾಗೂ ಸಹಜವಾಗಿ ಅದು ನಿರೀಕ್ಷಿತ ಎಂದು ಕೇಂದ್ರ ಸರ್ಕಾರ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾ. ಯಶವಂತ್ ವರ್ಮಾ ಅವರ ಮುಂದೆ ಕೇಂದ್ರ ಸರ್ಕಾರದ ಸ್ಥಾಯಿ ವಕೀಲ (ಸಿಜಿಎಸ್‌ಸಿ) ಕೀರ್ತಿಮಾನ್ ಸಿಂಗ್ ಅವರು ಈ ಕುರಿತು ಮೌಖಿಕ ಹೇಳಿಕೆ ನೀಡಿದರು. “ನಾವು ಸರ್ಕಾರದೊಂದಿಗೆ ಪರಿಶೀಲಿಸಿದ್ದೇವೆ, ತಿದ್ದುಪಡಿಯು ಯಾವುದಾದರೊಂದು ಸಮಯದಲ್ಲಿ ನಡೆಯುತ್ತದೆ, ಅದು ನಿರೀಕ್ಷಿತ” ಎಂದು ಸಿಂಗ್ ನುಡಿದರು.

ಸಾಮಾಜಿಕ ಮಾಧ್ಯಮ ಖಾತೆಗಳ ಅಮಾನತು ಅಥವಾ ಶಾಶ್ವತ ನಿಷೇಧ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಪ್ರಕರಣದ ಮುಖ್ಯ ವಿಚಾರಕ್ಕೆ ಹೋಗುವ ಮೊದಲು ಸರ್ಕಾರದ ನೀತಿಗಳು ನ್ಯಾಯಾಲಯದ ಮುಂದೆ ಇರುವ ಮನವಿಗಳ ಮೇಲೆ ಪರಿಣಾಮ ಬೀರುವುದರಿಂದ ಕೇಂದ್ರ ಯಾವುದೇ ನಿಯಂತ್ರಕ ಕಾರ್ಯವಿಧಾನವನ್ನು ಜಾರಿಗೊಳಿಸಲು ಮುಂದಾಗಿದೆಯೇ ಎಂದು ಪ್ರಕರಣದ ಮುಖ್ಯ ವಿಚಾರಕ್ಕೆ ಹೋಗುವ ಮೊದಲು ನ್ಯಾಯಮೂರ್ತಿಗಳು ತಿಳಿಯಲು ಬಯಸಿದರು.

ಮಾರ್ಗಸೂಚಿಗಳು ಯಾವಾಗ ಬರುತ್ತವೆ ಎಂಬುದರ ಕುರಿತು ಸ್ಪಷ್ಟತೆ ಇದೆ ಎಂದು ಸಿಂಗ್ ತಿಳಿಸಿದ ನಂತರ, ನಿಷೇಧಿತ ಸಾಮಾಜಿಕ ಮಾಧ್ಯಮ ಬಳಕೆದಾರರ ಪರ ವಕೀಲರು ವಿಚಾರಣೆಗೆ ಒತ್ತಾಯಿಸಿದರು.

ಮುಂದಿನ ವಿಚಾರಣೆಯ ದಿನಾಂಕದೊಳಗೆ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸದಿದ್ದರೆ, ನ್ಯಾಯಾಲಯ ಪ್ರಮುಖ ವಿಷಯದ ಕುರಿತಂತೆ ನಿರ್ಧರಿಸುತ್ತದೆ ಎಂದು ನ್ಯಾಯಮೂರ್ತಿ ವರ್ಮಾ ಎಚ್ಚರಿಸಿದರು. ಪ್ರಕರಣದ ಮುಂದಿನ ವಿಚಾರಣೆ ಡಿ. 19ಕ್ಕೆ ನಿಗದಿಯಾಗಿದೆ.