ಮನೆ ರಾಷ್ಟ್ರೀಯ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತದಲ್ಲಿ ಮತದಾನ

ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತದಲ್ಲಿ ಮತದಾನ

0

ಹೊಸದಿಲ್ಲಿ: ಗುಜರಾತ್ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಗುರುವಾರ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣೆಯ ಹಂತಗಳ ವಿವರಗಳನ್ನು ನೀಡಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

51,000ಕ್ಕೂ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮುಂದಿನ ವರ್ಷದ ಫೆಬ್ರವರಿ 18ರಂದು ಗುಜರಾತ್ ವಿಧಾನಸಭೆಯ ಅವಧಿ ಮಕ್ತಾಯವಾಗಲಿದೆ ಎಂದರು.

ಗುಜರಾತ್’ನಲ್ಲಿ 4.9 ಕೋಟಿಗೂ ಅಧಿಕ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 2.53 ಕೋಟಿ ಪುರುಷರು ಹಾಗೂ 2.37 ಕೋಟಿ ಮಹಿಳೆಯರಿದ್ದಾರೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವವರ ಸಂಖ್ಯೆ 4.61 ಲಕ್ಷ ಇದೆ. 9.8 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು, 4.04 ಲಕ್ಷ ಅಂಗವಿಕಲ ಮತದಾರರಿದ್ದಾರೆ. 1,417 ತೃತೀಯ ಲಿಂಗಿಗಳು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿನ 182 ವಿಧಾನಸಭೆ ಕ್ಷೇತ್ರಗಳಲ್ಲಿ 142 ಸಾಮಾನ್ಯ, 17 ಪರಿಶಿಷ್ಟ ಜಾತಿ ಮತ್ತು 23 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿವೆ. ಯುವ ಮತದಾರರನ್ನು ಉತ್ತೇಜಿಸಲು ಇದೇ ಮೊದಲ ಬಾರಿಗೆ 33 ಮತಗಟ್ಟೆಗಳನ್ನು ಅತ್ಯಂತ ಕಿರಿಯ ಯುವ ಮತಗಟ್ಟೆ ಸಿಬ್ಬಂದಿ ನಿಭಾಯಿಸಲಿದ್ದಾರೆ.

ಮಹಿಳಾ ಮತಗಟ್ಟೆ ಹಾಗೂ ಭದ್ರತಾ ಸಿಬ್ಬಂದಿಗಳಿಂದಲೇ ಸಂಪೂರ್ಣವಾಗಿ ನಿರ್ವಹಣೆಯಾಗುವ 1,274 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಆನ್ಲೈನ್ ನಾಮನಿರ್ದೇಶನ ಮತ್ತು ಅಫಿಡವಿಟ್ ಸೌಲಭ್ಯಗಳನ್ನು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಒದಗಿಸಲು ಇಸಿಐ ಸುವಿಧಾ ಪೋರ್ಟಲ್ ಅವಕಾಶ ನೀಡುತ್ತದೆ.

ಹಿಂದಿನ ಲೇಖನಉಗ್ರಗಾಮಿ ಮೊಹಮ್ಮದ್ ಆರಿಫ್‌’ಗೆ ವಿಧಿಸಲಾದ ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ
ಮುಂದಿನ ಲೇಖನನಟ ಶಶಿಕುಮಾರ್, ಕಾಂಗ್ರೆಸ್ ನಾಯಕ ಮುದ್ದ ಹನುಮೇಗೌಡ ಬಿಜೆಪಿ ಸೇರ್ಪಡೆ