ಮನೆ ಕಾನೂನು ಗುಜರಾತ್ ಹೈಕೋರ್ಟ್: ಮನುಸ್ಮೃತಿ ಓದುವಂತೆ ವಕೀಲರಿಗೆ ಸಲಹೆ ನೀಡಿದ ನ್ಯಾಯಮೂರ್ತಿ ಸಮೀರ್ ದವೆ

ಗುಜರಾತ್ ಹೈಕೋರ್ಟ್: ಮನುಸ್ಮೃತಿ ಓದುವಂತೆ ವಕೀಲರಿಗೆ ಸಲಹೆ ನೀಡಿದ ನ್ಯಾಯಮೂರ್ತಿ ಸಮೀರ್ ದವೆ

0

ಅಹಮದಾಬಾದ್: ಹೆಣ್ಣುಮಕ್ಕಳು ಈ ಹಿಂದೆ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17 ವರ್ಷ ದಾಟುವ ಮುನ್ನವೇ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ಸಂಗತಿಯಾಗಿತ್ತು ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ತನ್ನ ಬೇಡದ ಗರ್ಭವನ್ನು ತೆಗೆದುಹಾಕಲು ಅನುಮತಿ ಕೋರಿ ಅಪ್ರಾಪ್ತ ವಯಸ್ಸಿನ ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.

Join Our Whatsapp Group

ಈ ಕುರಿತು ಮನುಸ್ಮೃತಿ ಓದುವಂತೆ ವಕೀಲರಿಗೆ ಸಲಹೆ ನೀಡಿದ ನ್ಯಾಯಮೂರ್ತಿ, ಬಾಲಕಿ ಹಾಗೂ ಭ್ರೂಣದ ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಂಡು ಏಳು ತಿಂಗಳ ಭ್ರೂಣದ ಗರ್ಭಪಾತ ಮಾಡುವುದು ಸೂಕ್ತವೇ ಎಂದು ರಾಜ್ಕೋಟ್ ಸಿವಿಲ್ ಆಸ್ಪತ್ರೆಯಿಂದ ವೈದ್ಯಕೀಯ ಅಭಿಪ್ರಾಯ ಕೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡು, ರಾಜ್ಕೋಟ್ ಆಸ್ಪತ್ರೆಯ ಹೆರಿಗೆ ವಿಭಾಗದ ಮುಖ್ಯಸ್ಥರ ಅಭಿಪ್ರಾಯ ಪಡೆದ ನ್ಯಾಯಮೂರ್ತಿ ಸಮೀರ್ ದವೆ ಅವರು, ಬಾಲಕಿಯ ಮಾನಸಿಕ ಸ್ಥಿತಿಯನ್ನು ಸ್ಪಷ್ಟಪಡಿಸಿಕೊಳ್ಳಲು ಆಕೆಯನ್ನು ಮನೋವೈದ್ಯರು ಪರೀಕ್ಷಿಸುವಂತೆ ಹಾಗೂ ಆಕೆಗೆ ಮೂಳೆ ಬೆಳವಣಿಗೆ ಪರೀಕ್ಷೆ ನಡೆಸಲು ವೈದ್ಯರ ಸಮಿತಿಯೊಂದನ್ನು ರಚಿಸಲು ಆದೇಶಿಸಿದ್ದಾರೆ.

ನ್ಯಾಯಾಲಯವು ಗರ್ಭಪಾತಕ್ಕೆ ಆದೇಶಿಸಿದರೆ ಆಕೆ ತನ್ನ ಭ್ರೂಣವನ್ನು ತೆಗೆಸಿಕೊಳ್ಳಲು ಸಮರ್ಥವಾಗಿದ್ದಾಳೆಯೇ ಎಂದು ತಿಳಿದುಕೊಳ್ಳಲು ಅವರು ಬಯಸಿದ್ದಾರೆ. ಜೂನ್ 15ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದೆ.

ಒಮ್ಮೆ ಮನುಸ್ಮೃತಿ ಓದಿರಿ

ಆಗಸ್ಟ್ 16ರಂದು ಬಾಲಕಿಯ ಹೆರಿಗೆ ದಿನಾಂಕ ನೀಡಲಾಗಿದೆ. ಹೀಗಾಗಿ ಆದಷ್ಟು ಬೇಗನೆ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಬಾಲಕಿ ಪರ ವಕೀಲರಾದ ಸಿಕಂದರ್ ಸೈಯದ್ ಮನವಿ ಮಾಡಿದ್ದರು. ಭ್ರೂಣ ಹಾಗೂ ಅತ್ಯಾಚಾರ ಸಂತ್ರಸ್ತೆ ಇಬ್ಬರೂ ಉತ್ತಮ ಆರೋಗ್ಯದಿಂದ ಇದ್ದರೆ ಗರ್ಭಪಾತಕ್ಕೆ ಕೋರ್ಟ್ ಅನುಮತಿ ನೀಡಲಾರದು ಎಂದು ನ್ಯಾಯಮೂರ್ತಿ ತಿಳಿಸಿದ್ದರು.

“ನಾವು 21ನೇ ಶತಮಾನದಲ್ಲಿ ಬದುಕುತ್ತಿರುವ ಕಾರಣಕ್ಕೆ ಈ ಉದ್ವೇಗವಿದೆ. ಈ ಹಿಂದೆ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ತಾಯ್ತನ ಪಡೆದುಕೊಳ್ಳುತ್ತಿದ್ದರು. ನೀವು ಇದನ್ನು ಓದುವುದಿಲ್ಲ. ಆದರೆ ಇದಕ್ಕಾಗಿ ಒಮ್ಮೆ ಮನುಸ್ಮೃತಿಯನ್ನು ಓದಿರಿ” ಎಂದು ವಕೀಲರಿಗೆ ನ್ಯಾಯಮೂರ್ತಿ ಸಲಹೆ ನೀಡಿದರು.

ಒಂದು ಕಾಲದಲ್ಲಿ 14- 15 ವರ್ಷಕ್ಕೆ ಹೆಣ್ಣುಮಕ್ಕಳು ತಾಯಂದಿರಾಗುವುದು ಸರ್ವೇ ಸಾಮಾನ್ಯವಾಗಿತ್ತು. 17 ವರ್ಷಕ್ಕೆ ತಲುಪುವ ವೇಳೆಗೆ ಬಹುತೇಕರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿರುತ್ತಿದ್ದರು ಎಂದು ಹೇಳಿದ್ದಾರೆ.

ಮಗು ಜೀವಂತ ಹೊರ ಬಂದರೆ ಏನು ಮಾಡುವುದು?

ಗರ್ಭ ತೆಗೆಸುವ ಪ್ರಕ್ರಿಯೆ ವೇಳೆ ಮಗು ಜೀವಂತವಾಗಿ ಜನಿಸುವ ಸಾಧ್ಯತೆಯೂ ಇದೆ ಎಂದು ನ್ಯಾಯಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. “ಇದು ನಡೆದರೆ, ಮಗುವನ್ನು ಯಾರು ನೋಡಿಕೊಳ್ಳುತ್ತಾರೆ? ಮಗು ಜೀವಂತ ಜನಿಸಿದರೆ ಅದನ್ನು ಕೊಲ್ಲಲು ಕೋರ್ಟ್ ಅನುಮತಿ ನೀಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ. ಏಳು ತಿಂಗಳು ಕಳೆದಿರುವುದರಿಂದ ಮಗು ಜೀವಂತ ಜನಿಸಿದರೆ ಏನು ಮಾಡಬಹುದು? ಸಾಮಾಜಿಕ ಕಲ್ಯಾಣ ಅಧಿಕಾರಿಯ ಸಲಹೆ ಪಡೆಯಲು ಕೋರ್ಟ್ ಬಯಸುತ್ತದೆ ಎಂದು ವಕೀಲರಿಗೆ ತಿಳಿಸಿದ ನ್ಯಾಯಮೂರ್ತಿ, “ದತ್ತು ಸ್ವೀಕಾರ ಆಯ್ಕೆಯ ಬಗ್ಗೆ ಪರಿಶೀಲಿಸುವುದನ್ನು ನೀವು ಆರಂಭಿಸಿ” ಎಂದಿದ್ದಾರೆ.

ತಾಯಿ ಮತ್ತು ಮಗು ಇಬ್ಬರೂ ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಇದ್ದರೆ ಗರ್ಭಪಾತಕ್ಕೆ ಕೋರ್ಟ್ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದಲ್ಲಿ ಮಗು 1.27 ಕೆಜಿ ತೂಕ ಇರುವುದು ಸ್ಕ್ಯಾನಿಂಗ್ನಿಂದ ತಿಳಿದುಬಂದಿದೆ.

ಹಿಂದಿನ ಲೇಖನಗೃಹಲಕ್ಷ್ಮೀ ಯೋಜನೆಗಾಗಿ ಇತರ ಪಿಂಚಣಿಗಳನ್ನು ಕಡಿತ ಇಲ್ಲ: ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟನೆ
ಮುಂದಿನ ಲೇಖನಹನುಮಂತನಗರ ಕುಮಾರಸ್ವಾಮಿ ದೇವಾಲಯ