ಗುವಾಹಟಿ (Guwahati)- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಆರೋಪದ ಬಂಧನಕ್ಕೀಡಾಗಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು ಸಿಕ್ಕಿದೆ.
ನಿನ್ನೆ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದ ಅಸ್ಸಾಂ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.
ಅಸ್ಸಾಂನ ಕೊಕ್ರಜಾರ್‌ನ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಮೇವಾನಿ ವಿರುದ್ಧ ದೂರು ದಾಖಲಿಸಿದ ನಂತರ ಅಸ್ಸಾಂ ಪೊಲೀಸರ ತಂಡವು ಗುರುವಾರ ಗುಜರಾತ್‌ನ ಪಾಲನ್‌ಪುರದಿಂದ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿದ್ದರು.
ಮೇವಾನಿ ಮೇಲೆ ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳಕ್ಕೆ ಸಂಬಂಧಿಸಿದ ಅಪರಾಧ, ಧಾರ್ಮಿಕ ಭಾವನೆಗಳಿ ಧಕ್ಕೆ ತಂದಿರುವುದು ಮತ್ತು ಶಾಂತಿ ಭಂಗಕ್ಕೆ ಕಾರಣವಾಗಬಹುದಾದ ಪ್ರಚೋದನೆಯ ಆರೋಪಗಳನ್ನು ಹೊರಿಸಿ ಬಂಧಿಸಲಾಗಿತ್ತು.
ಮೇವಾನಿ ಅವರ ಬಂಧನವನ್ನು “PMO (ಪ್ರಧಾನಿ ಕಚೇರಿ) ನಿಂದ ಸೇಡಿನ ರಾಜಕೀಯ” ಎಂದು ವಿಪಕ್ಷಗಳು ಟೀಕಿಸಿದ್ದವು.
ಇದೇ ವಿಚಾರವಾಗಿ ಮಾತನಾಡಿದ್ದ ಜಿಗ್ನೇಶ್ ಮೇವಾನಿ, ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಷಡ್ಯಂತ್ರ. ಅವರು ನನ್ನ ವರ್ಚಸ್ಸನ್ನು ಹಾಳುಮಾಡಲು ಈ ರೀತಿ ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಿದ್ದಾರೆ. ಇದೇ ರೀತಿಯ ಷಡ್ಯಂತ್ರವನ್ನು ಅವರು ರೋಹಿತ್ ವೇಮುಲಾಗೆ ಮಾಡಿದ್ದರು. ಚಂದ್ರಶೇಖರ್ ಆಜಾದ್ ಅವರ ಮೇಲೂ ಷಡ್ಯಂತ್ರ ಪ್ರಯೋಗಿಸಿದ್ದರು. ಈಗ ಅವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ ಮೇವಾನಿ ಕಿಡಿಕಾರಿದ್ದರು.