ನವದೆಹಲಿ (New Delhi)- ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ (Jignesh mevani) ಅಸ್ಸಾಂನ ಬರ್ಪೇಟಾ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿಯನ್ನು ಬಂಧಿಸಲಾಗಿತ್ತು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಜಿಗ್ನೇಶ್ ಅವರನ್ನು ಏ.21 ರಂದು ಬಂಧಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಯದಿಂದ ಜಾಮೀನು ಪಡೆದು ಹೊರ ಬಂದ ಬೆನ್ನಲ್ಲೇ ಬರ್ಪೆಟಾ ಪೊಲೀಸರು ಅವರನ್ನು ಏಪ್ರಿಲ್ 25ರಂದು ಪುನಃ ಬಂಧಿಸಿದ್ದರು.
ಗುವಾಹಟಿ ವಿಮಾನ ನಿಲ್ದಾಣದಿಂದ ಜಿಗ್ನೇಶ್ ಮೇವಾನಿ ಅವರನ್ನು ಕೋಕ್ರಜಾರ್‌ಗೆ ಕರೆತರುವಾಗ ಪೊಲೀಸರ ತಂಡದಲ್ಲಿದ್ದ ಮಹಿಳಾ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪ ಕೇಳಿಬಂದಿತ್ತು. ಇದರನ್ವಯ ಐಪಿಸಿ ಸೆಕ್ಷನ್ 294, 353 ಹಾಗೂ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಧಾನಿ ಮೋದಿ ವಿರುದ್ಧದ ಟ್ವೀಟ್ ವಿಚಾರವಾಗಿ ಬಂಧಿಸಿದ ಕುರಿತು ಪ್ರಧಾನ ಮಂತ್ರಿ ಕಚೇರಿಯಿಂದ ಸೇಡಿನ ರಾಜಕೀಯ ಎಂದು ಜಿಗ್ನೇಶ್ ಕಿಡಿಕಾರಿದ್ದರು. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಷಡ್ಯಂತ್ರ. ಅವರು ನನ್ನ ವರ್ಚಸ್ಸನ್ನು ಹಾಳುಮಾಡಲು ನನ್ನನ್ನು ಬಂಧಿಸಿದ್ದಾರೆ. ಅವರು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರು ಈ ರೀತಿಯ ಷಡ್ಯಂತ್ರವನ್ನು ರೋಹಿತ್ ವೇಮುಲಾ ವಿರುದ್ಧ, ಚಂದ್ರಶೇಖರ್ ಆಜಾದ್ ವಿರುದ್ಧ ಮಾಡಿದ್ದರು. ಈಗ ನನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಜಿಗ್ನೇಶ್ ಮೇವಾನಿ ಮೊದಲ ಪ್ರಕರಣದಲ್ಲಿ ಜಾಮೀನು ಪಡೆದಾಗ ಹೇಳಿದ್ದರು.
ಟ್ವೀಟ್ ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿ ವಿರುದ್ಧ ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳಕ್ಕೆ ಸಂಬಂಧಿಸಿದ ಅಪರಾಧ, ಧಾರ್ಮಿಕ ಭಾವನೆಗಳನ್ನು ಉದ್ರೇಕಗೊಳಿಸುವುದು ಮತ್ತು ಶಾಂತಿ ಉಲ್ಲಂಘನೆಗೆ ಕಾರಣವಾಗುವ ಪ್ರಚೋದನೆ ಮಾಡುವುದರಡಿ ಕೇಸ್ ದಾಖಲಿಸಲಾಗಿದೆ.