ಗುಂಡ್ಲುಪೇಟೆ: ಮಾರಾಟ ಮಾಡುವ ಉದ್ದೇಶದಿಂದ ಜಮೀನಿನ ಮಧ್ಯೆ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ತೆರಕಣಾಂಬಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಕೊಡಸೋಗೆ ಗ್ರಾಮದ ರಸ್ತೆ ಬದಿಯ ಜಮೀನೊಂದರಲ್ಲಿ ಜ.16ರ ಗುರುವಾರ ನಡೆದಿದೆ.
ತಾಲೂಕಿನ ಕೊಡಸೋಗೆ ಗ್ರಾಮದ ರಮೇಶ್(49) ಬಂಧಿತ ಆರೋಪಿ.
ಈತ ತನ್ನ ಜಮೀನಿನಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಖಚಿತ ಮಾಹಿತಿ ಅರಿತ ತೆರಕಣಾಂಬಿ ಪೊಲೀಸರು ಸಬ್ ಇನ್ಸ್ ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಗಿಡದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಗಾಂಜಾ ಗಿಡ ಸೊಂಪಾಗಿ ಬೆಳೆದಿದ್ದು, ಸುಮಾರು 5 1/2 ಅಡಿ ಎತ್ತರ ಇದ್ದು, ಗಿಡದಲ್ಲಿ ಗೊಂಡೆ (ಕೆನಾಬೀಸ್) ಹೂವುಗಳು ಇರುವುದು ಕಂಡು ಬಂದಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಮಾರಾಟ ಮಾಡುವ ಉದ್ದೇಶದಿಂದ ಬೆಳೆಯಲಾಗಿದೆ ಎಂದು ಒಪ್ಪಿಕೊಂಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ತೆರಕಣಾಂಬಿ ಠಾಣೆ ಪೊಲೀಸ್ ಪೇದೆಗಳಾದ ಬಂಗಾರನಾಯ್ಕ, ಕೃಷ್ಣ, ರಾಘವೇಂದ್ರಶೆಟ್ಟಿ, ಸುರೇಶ್, ಸಿದ್ದರಾಮು, ಶಿವಪ್ರಸಾದ್ ಇತರರು ಭಾಗವಹಿಸಿದ್ದರು.