ಶ್ರೀನಗರ: ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ, ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ(ಜು.15ರಂದು) ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಉಗ್ರರು ಅಡಗಿ ಕೂತಿರುವ ಖಚಿತ ಮಾಹಿತಿಯ ಮೇರೆಗೆ ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ (ಜೆಕೆ ಪೊಲೀಸ್) ವಿಶೇಷ ಸಿಬ್ಬಂದಿಗಳು ಸೋಮವಾರ ಸಂಜೆ ದೋಡಾ ಪಟ್ಟಣದಿಂದ ಸುಮಾರು 55 ಕಿಮೀ ದೂರದಲ್ಲಿರುವ ದೇಸಾ ಅರಣ್ಯ ವಲಯದ ಧರಿ ಗೋಟೆ ಉರರಬಾಗಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಯೋಧರು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದಾರೆ.
20 ನಿಮಿಷಕ್ಕೂ ಹೆಚ್ಚಿನ ಕಾಲ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಯೋಧರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಕಳೆದ ವಾರ ಕಥುವಾದಲ್ಲಿ ಐವರು ಯೋಧರು ಹುತಾತ್ಮರಾದ ನಂತರ ಜಮ್ಮು ಪ್ರದೇಶದಲ್ಲಿ ನಡೆದ ಎರಡನೇ ಪ್ರಮುಖ ಎನ್‌ಕೌಂಟರ್ ಇದಾಗಿದೆ.
ದಾಳಿಯ ಹೊಣೆಯನ್ನು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ನ ‘ಕಾಶ್ಮೀರ ಟೈಗರ್ಸ್’ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.















