ಗಂಗಾಧರೇಶ್ವರ ಸ್ವಾಮಿ ನೆಲೆಸಿಹ ಬೆಂಗಳೂರಿನ ಗವೀಪುರಂ ಗುಟ್ಟಹಳ್ಳಿ ಗುರು ಶನೇಶ್ವರ ಸ್ವಾಮಿಯ ನೆಲೆವೀಡೂ ಹೌದು. ಇಲ್ಲಿ ಗುರು ಶನೇಶ್ಚರ ಸ್ವಾಮಿಯ ಪುರಾತನ ದೇವಾಲಯವಿದೆ. ಕೆಂಪೇಗೌಡರು ಕಟ್ಟಿಸಿದ ಕೆಂಪಾಂಬುಧಿ ಕೆರೆಯ ದಂಡೆಯ ಮೇಲಿರುವ ಈ ದೇವಾಲಯ ಮಹಿಮಾನ್ವಿತವಾಗಿದೆ.
ವಿಶಾಲವಾದ ಪ್ರಾಕಾರ, ಸುಂದರ ಗೋಪುರ, ವಿಶಾಲ ಮಂಟಪ ಹಾಗೂ ಗರ್ಭಗೃಹವಿರುವ ಈ ದೇವಾಲಯದಲ್ಲಿ ಪೂರ್ವಾಭಿಮುಖವಾಗಿ ಗುರಶನೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಎಡಭಾಗದಲ್ಲಿರುವ ಗೂಡಿನಲ್ಲಿ ಗಣಪತಿಯ ಸುಂದರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಪ್ರವೇಶ ದ್ವಾರದ ಬಲಭಾಗದಲ್ಲಿ ನವಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
ವಿಶಾಲವಾದ ಜಾಗದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಮುಂಭಾಗದಲ್ಲಿ ಅಶ್ವತ್ಥ ಕಟ್ಟೆ, ಗರುಡಗಂಬವೂ ಇದೆ. ದೇವಾಲಯದ ಹಿಂಭಾಗದಲ್ಲಿ ಕಲ್ಯಾಣ ಮಂಟಪವೂ ಇದೆ. ಪ್ರತಿ ಶನಿವಾರ ಇಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.
ಶನೇಶ್ವರ ಜಯಂತಿಯಂದು ಹಾಗೂ ಮಹಾಶಿವರಾತ್ರಿಯ ದಿನ ವಿಶೇಷ ಪೂಜೆ, ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವ ರಥದಲ್ಲಿ ಸ್ವಾಮಿಯ ರಥೋತ್ಸವವೂ ಜರುಗುತ್ತದೆ.
ಕೊಂಡಸೇವೆ : ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಈ ಮಹಾಕ್ಷೇತ್ರದಲ್ಲಿ ಜಾತ್ರೆಯ ಸಮಯದಲ್ಲಿ ಕೊಂಡ ಸೇವೆಯೂ ನಡೆಯುತ್ತದೆ. ಶನೇಶ್ಚರ ಸ್ವಾಮಿ ದೇವಾಲಯದ ಸ್ವಾಮೀಜಿ ಶ್ರೀ ಎಚ್.ವಿ.ಸ್ವಾಮಿ ಅವರು ಕೊಂಡದ ದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಖಡ್ಗ ಝಳಪಿಸುತ್ತಾ ಕೆಂಡದ ಮೇಲೆ ನಡೆದು, ದೇವಾಲಯ ಪ್ರವೇಶಿಸುತ್ತಾರೆ. ನಂತರ ಹರಕೆ ಹೊತ್ತ ನೂರಾರು ಭಕ್ತರು ಜೈ ಶನೇಶ್ವರ ಎಂದು ಉದ್ಗಾರ ಮಾಡುತ್ತಾ ಕಾದ ಕೆಂಡದ ಮೇಲೆ ನಡೆಯುತ್ತಾರೆ.
1949ರಲ್ಲಿ ಈ ಕ್ಷೇತ್ರದಲ್ಲಿ ಆರಂಭವಾದ ಈ ಕೊಂಡ ಸೇವೆ ಇಂದಿನವರೆಗೆ ಅನೂಚಾನವಾಗಿ ನಡೆದು ಬಂದಿದೆ. ಕೊಂಡ ನಡೆಯುವ ದಿನ ಸಾಯಂಕಾಲ ಸಾಲಂಕೃತವಾದ ಪಲ್ಲಕ್ಕಿಯಲ್ಲಿ ವಿಜೃಂಭಣೆಯಿಂದ ಸ್ವಾಮಿಯ ಉತ್ಸವ ಜರುಗುತ್ತದೆ.
ಈ ಅಗ್ನಿಕೊಂಡ ಉತ್ಸವದ ಅಂಗವಾಗಿ ಐದು ದಿನಗಳ ಕಾಲ ಹೋಮ ಹವನವೇ ಮೊದಲಾದ ಹಲವು ಧಾರ್ಮಿಕ ವಿಧಿಗಳು ಜರುಗುತ್ತವೆ. ಕೊಂಡ ನಡೆಯುವ ಹಿಂದಿನ ದಿನ ದೊಡ್ಡ ಹೊಂಡ ತೆಗೆದು, ರಾತ್ರಿಯೇ ಸೌದೆ ಹಾಕಿ ಉರಿಹಾಕಿ ಕೆಂಡ ಮಾಡುತ್ತಾರೆ. ಬೆಳಗ್ಗೆ ಮಡಿಯುಟ್ಟ ಭಕ್ತರು ಉರಿಯುವ ಕೆಂಡದ ಮೇಲೆ ನಡೆದು ಹರಕೆ ತೀರಿಸಿ ಧನ್ಯರಾಗುತ್ತಾರೆ.