ಮಾಗಡಿ (ರಾಮನಗರ): ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಎಲ್ಲೇ ಹೋದರೂ ಬೆಂಕಿ ಹಚ್ಚೋದೆ ಕೆಲಸ. ಅವರು ಯಾವತ್ತೂ ಅಭಿವೃದ್ಧಿ ವಿಚಾರದಲ್ಲಿ ಓಟ್ ಕೇಳಿಲ್ಲ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ನಾಗಮಂಗಲ ಗಲಭೆ ಕಾಂಗ್ರೆಸ್ ಪ್ರಾಯೋಜಿತ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಮನಸ್ಥಿತಿ ಮತ್ತು ಮಾತನಾಡುವುದು ಕೂಡ ಹಾಗೆಯೇ ಎಂದು ಕಿಡಿಕಾರಿದರು.
ನಾನ ಸಂಸದನಾದ 24 ಗಂಟೆಯೊಳಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ. ಪ್ರಧಾನಿ ಮೋದಿ ಅವರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡಿಸುತ್ತೇನೆ ಎಂದಿದ್ದರು. ಮೊದಲು ಆ ಕೆಲಸ ಮಾಡಲಿ. ಬೆಂಕಿ ಇಡುವ ಕೆಲಸ ಮೊದಲು ಬಿಡಲಿ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನಲೆಯಲ್ಲಿ ಗಲಭೆ ಮಾಡಿದ್ದಾರೆ ಎಂದಿರುವ ಕುಮಾರಸ್ವಾಮಿ ಅವರ ಮನಸ್ಥಿತಿ ಎಂತಹದ್ದು ಎಂಬುದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ಯಾವುದೇ ಒಂದು ಧರ್ಮವನ್ನು ಓಲೈಕೆ ಮಾಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಧರ್ಮದ ವಿಚಾರದಲ್ಲಿ ಯಾರೇ ತೊಂದರೆ ಕೊಟ್ಟರೂ ಸಹಿಸಲ್ಲ ಎಂದರು.
ಕಾಂಗ್ರೆಸ್ ಒಂದು ಕೋಮಿನ ಓಲೈಕೆ ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಅವರೇ ಈ ಪ್ರಕರಣವನ್ನು ತನಿಖೆ ಮಾಡಲಿ. ಈ ಕುರಿತು ನಾನು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಅವರನ್ನೇ ತನಿಖಾಧಿಯಾರಿಯನ್ನಾಗಿ ಮಾಡಿ. ಅವರ ತನಿಖೆಯಿಂದಲೇ ಎಲ್ಲಾ ಹೊರಗಡೆ ಬರಲಿ ಎಂದು ತಿರುಗೇಟು ನೀಡಿದರು.
ಗಲಭೆ ಪ್ರಕರಣಕ್ಕೆ ರಾಜಕೀಯ ತಿರುವು ಕೊಡುತ್ತಿರುವುದು ನಾವಲ್ಲ. ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಪ್ರಕರಣವನ್ನು ರಾಜಕೀಯವಾಗಿ ವಿಶ್ಲೇಷಿಸುತ್ತಿದ್ದಾರೆ. ಪ್ರಕರಣದ ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆಯಾಗಲಿ ಎಂದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅಪಾರ ನಂಬಿಕೆ ಇದೆ. ಅವರು ಇರುವವರೆಗೂ ಅವರೇ ಅನಭಿಷಿಕ್ತ ದೊರೆ ಎಂದು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿರುವ ವಿವಿಧ ಹೆಸರುಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.