ಬೆಂಗಳೂರು (Bengaluru): ಕಾಂಗ್ರೆಸ್ ಪಕ್ಷದಲ್ಲಿ ನಾಮಾಕವಸ್ತೆಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರ ಮಾತು ಏನು ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮಾತು ಕೂಡ ನಡೆಯಲ್ಲ. ಇಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಒಬ್ಬರೇ ಇದ್ದಾರೆ. ಅವರ ಮಾತೇ ಇಲ್ಲಿ ನಡೆಯುವುದು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕಳೆದ ಮೂರ್ನಾಲ್ಕು ದಿನದ ಹಿಂದೆ ಕಾಂಗ್ರೆಸ್ ನಾಯಕರಿಗೆ ಹೊಸ ಅಧ್ಯಾಯ ಬರೆಯುವ ಪ್ರಾಮಾಣಿಕತೆ ಇದ್ದರೆ ಚರ್ಚೆಗೆ ಸಿದ್ದ ಅಂದಿದ್ದೇನೆ. ಅದು ನಮ್ಮ ವೀಕ್ ನೆಸ್ ಅಂತ ಭಾವನೆ ಬೇಡ ಎಂದರು.
ರಾಜ್ಯಸಭೆಯ ಚುನಾವಣಾ ದಿನಾಂಕ ಘೋಷಣೆ ಆದ ದಿನದಿಂದಲೂ ಎಲ್ಲರ ಹೇಳಿಕೆ ಗಮನಿಸಿದ್ದೇನೆ. ಕಾಂಗ್ರೆಸ್ ನಾಯಕರು ಹೇಳ್ತಾರೆ ಅಭ್ಯರ್ಥಿ ಮೊದಲು ನಾವು ಹಾಕಿದ್ದೇವೆ ಬೆಂಬಲ ನೀಡಿ ಎಂದಿದ್ದಾರೆ. ಆದರೆ ಅದಕ್ಕೂ ಮೊದಲು ಸೋನಿಯಾ ಗಾಂಧಿ ಅವರ ಜೊತೆ ಹೆಚ್.ಡಿ.ದೇವೇಗೌಡರು ಮನವಿ ಮಾಡಿದ್ದರು. ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಅಂತ ತೀರ್ಮಾನ ಮಾಡಿದ್ರೆ ಹೇಗೆ? ಎಂದು ಅವರು ಪ್ರಶ್ನಿಸಿದರು.
ನಾವು ಮೊದಲು ಹಾಕಿ ನೀವು ಬೆಂಬಲ ಕೊಡಿ ಅಂದರೆ ಹೇಗೆ? ಅದಕ್ಕೂ ಮುನ್ನ ನಮ್ಮ ನಾಯಕರ ಜತೆಗೆ ಯಾರಾದರೂ ಚರ್ಚೆ ಮಾಡಿದರಾ? ನಾವೇನು ನಿಮ್ಮ ಅಡಿಯಾಳುಗಳಾ? ಎಂದು ಕುಮಾರಸ್ವಾಮಿ ಗುಡುಗಿದರು.
ನಮ್ಮ ನುಡಿಮುತ್ತುಗಳ ಮೂಲಕವೇ ಮನಸ್ಸು ಗೆಲ್ಲುವ ಪ್ರಯತ್ನ ಪಟ್ಟೆ. ಇದನ್ನು ಶಿವಕುಮಾರ್ ಅವರಿಗೆ ಹೇಳ್ತೀನಿ. ಅನ್ ಕಂಡೀಷನ್ ನಲ್ಲಿ ಸಿಎಂ ಮಾಡಲಿಲ್ವಾ ಅಂತರಲ್ಲಾ, ನಾನು ಅವರಿಗೆ ಕೇಳ್ತೀನಿ, ಬಂದಿದ್ದು ನಿಮ್ಮಿಂದ. ಬಿಜೆಪಿಯಿಂದಲೂ ಆಗ ಸಿಎಂ ಆಗಲು ಆಫರ್ ಇತ್ತು. ಬಿಜೆಪಿ ಬಿ ಟೀಂ ಅಂತ ಹೇಳಿ ಸಮಾಜದ ಮತ ತೆಗೆಯಲು ಶತಪ್ರಯತ್ನ ಮಾಡಿದಿರಿ. ನಮ್ಮ ಕದ ತಟ್ಟಿದ್ದು ನೀವು. ದೇವೇಗೌಡರು ಒಪ್ಪಿಗೆ ಕೊಟ್ಟರು. ಕೋಮುಶಕ್ತಿ ಉದ್ಭವ ಆಗೋದು ಬೇಡ ಅಂತ. ನೀವೇ ಸಿಎಂ ಆಗಿ ಅಂತ ದೇವೇಗೌಡರು ಹೇಳಿದರು. ಎಷ್ಟು ಬಾರಿ ಹೇಳಲಿ ಎಂದರು.
ಕಾಂಗ್ರೆಸ್ ಪಕ್ಷಕ್ಕೆ 2023ಕ್ಕೆ ಕೊನೆ ಮೊಳೆ ಹೊಡೆದು ಸಿದ್ದರಾಮಯ್ಯ ಹೋಗ್ತಾರೆ ಎಂದ ಹೆಚ್ ಡಿಕೆ, ನಿನ್ನೆ ರಾತ್ರಿ ನಾನು ಡಿ.ಕೆ. ಶಿವಕುಮಾರ್ ಜತೆ ದೂರವಾಣಿಯಲ್ಲಿ ಮಾತಾಡಿದ್ದು ಸತ್ಯ. ಇದರಲ್ಲಿ ಕದ್ದು ಮುಚ್ಚಿ ಇಡೋದು ಏನಿದೆ? ಎಂದು ಪ್ರಶ್ನಿಸಿದರು.
ಜೆಡಿಎಸ್ ಅಸಮಾಧಾನ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಶಿವಲಿಂಗೇಗೌಡರಿಗೆ ನಾನೇ ಮಾತಾಡಿದ್ದೇನೆ. ಇನ್ನು ಜಿ.ಟಿ.ದೇವೇಗೌಡರು ಮತ ಹಾಕುವುದಾಗಿ ಹೇಳಿದ್ದಾರೆ. ಗುಬ್ಬಿ ಶ್ರೀನಿವಾಸ್ ಅವರನ್ನು ಸಂಪರ್ಕ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಸಭೆ ಉಸ್ತುವಾರಿ ಕಿಶನ್ ರೆಡ್ಡಿ ಅವರನ್ನು ನೀವು ಭೇಟಿಯಾದಿರಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನ್ಯಾಕೆ ಭೇಟಿ ಮಾಡಲಿ? ಎಂದು ಪ್ರಶ್ನಿಸಿದರು.