ಮನೆ ರಾಜಕೀಯ ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ನೋಡಿಕೊಳ್ಳಲಿ: ಹೆಚ್‌.ಡಿ.ಕುಮಾರಸ್ವಾಮಿ ತಿರುಗೇಟು

ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ನೋಡಿಕೊಳ್ಳಲಿ: ಹೆಚ್‌.ಡಿ.ಕುಮಾರಸ್ವಾಮಿ ತಿರುಗೇಟು

0

ತುಮಕೂರು (Tumakuru)- ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ಎನ್ನುವುದನ್ನು ನೋಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ತುಮಕೂರಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಜೆಡಿಎಸ್ ಒಂದೂ ಸ್ಥಾನ ಗೆಲ್ಲಲ್ಲ ಎಂದಿರುವ ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ಎನ್ನುವುದನ್ನು ನೋಡಿಕೊಳ್ಳಲಿ. ಕಳೆದ ಬಾರಿ ಏನಾಗಿದೆ ಎಂದು ಅವರಿಗೆ ಗೊತ್ತಲ್ವಾ? ಅವರು ಇನ್ನೂ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಐದು ವರ್ಷ ಮುಖ್ಯಮಂತ್ರಿ ಆಗಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಅನ್ನೋದು ಇನ್ನು ತೀರ್ಮಾನ ಮಾಡಿಕೊಂಡಿಲ್ಲ. ನಮ್ಮ ಪಕ್ಷದ ಬಗ್ಗೆ ಒಂದೂ ಸೀಟು ಗೆಲ್ಲಲ್ಲ ಅನ್ನೋದು ರಾಜಕೀಯವಾಗಿ ಏನೇನೂ ತಿಳುವಳಿಕೆ ಇಲ್ಲದ ವ್ಯಕ್ತಿ ಹೇಳುವ ಮಾತು. ನಾವುಗಳೆಲ್ಲಾ ತಂತ್ರಗಾರಿಕೆ ಮಾಡಿ ಸೋಲಿಸುತ್ತೇವೆ ಎಂಬ ಭಯ ಇದ್ದರೆ. ಅವರು ಕೊನೆವರೆಗೂ ಕ್ಷೇತ್ರವನ್ನು ರಹಸ್ಯವಾಗಿಟ್ಟುಕೊಂಡು ಚುನಾವಣೆ ಮಾಡಲಿ ಎಂದರು.

ದೇವೇಗೌಡರು ಇಲ್ಲದೇ ಹೋಗಿದ್ದರೆ ತುಮಕೂರಲ್ಲಿ ನಿರಂತರ ಬರಗಾಲ ಇರುತ್ತಾ ಇತ್ತು. ಆಗ ದೇವೇಗೌಡರು ಕಾವೇರಿ ನೀರಿಗಾಗಿ ಹೋರಾಡ ಮಾಡಿದ್ರು. ಅಂದಿನ ಸರ್ಕಾರ ಈ ವಿಚಾರವಾಗಿ ನಿರ್ಲಕ್ಷ್ಯ ಮಾಡಿದರು. 1964ರಲ್ಲಿ ಖಾಸಗಿ ಬಿಲ್ ತಂದಾಗ ಏನಾಯ್ತು? ಹೇಮಾವತಿ ನಿರ್ಮಾಣ ಆಗಲು ಕಾರಣ ಯಾರು? ಅಂದು ದೇವೇಗೌಡರು ಹೋರಾಟ ಮಾಡದೇ ಹೋಗಿದ್ದರೆ ಹೇಮಾವತಿ ಜಲಾಶಯ ಆಗ್ತಾ ಇರಲಿಲ್ಲ. ಕುತಂತ್ರದ ರಾಜಕಾರಣಕ್ಕೆ ತೆರೆ ಎಳೆಯಿರಿ. ಅಪಪ್ರಚಾರ ಮಾಡೋದನ್ನು ಮೊದಲು ಬಿಡಿ. ತುಮಕೂರು ಜಿಲ್ಲೆಗೆ ದೇವೇಗೌಡರು ಹಾಗೂ ಜೆಡಿಎಸ್‌ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ನೋಡಿ ಎಂದು ಹೇಳಿದರು.

2006 ರಲ್ಲಿ ನಾನು ಸಿಎಂ ಆಗಿದ್ದಾಗ ತುಮಕೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು‌. ಪರಿಹಾರ ನೀಡುವ ಕುರಿತು ಮನವಿ ಮಾಡಿದ್ರಿ. ಕಳೆದ ಬಾರಿ ಸಿಎಂ ಆದಾಗ ನಾನು ಅನುದಾನ ಕೊಟ್ಟೆ. ಆದರೆ, ಈ ಬಿಜೆಪಿ ಸರ್ಕಾರ ನಾನು ಕೊಟ್ಟ ಅನುದಾನ ವಾಪಸ್ ಪಡೆದರು ಎಂದರು.

ಸಸ್ಪೆಂಡ್‌ ಅಲ್ಲ, ಡಿಸ್ಮಿಸ್‌ ಮಾಡಬೇಕು!

ಇನ್ನು, ಡಿಕೆ ಶಿವಕುಮಾರ್‌ ಜೊತೆ ದಿವ್ಯಾ ಹಾಗರಗಿ ಫೋಟೋ ವೈರಲ್‌ ‌ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಫೋಟೋ ಜೊತೆ‌ ಬಿಜೆಪಿ ಅವರ ಬರಹ ಅವರ ಕೀಳು ಅಭಿರುಚಿಯನ್ನು ತೋರಿಸುತ್ತದೆ. ಅವರು ನಿಜಕ್ಕೂ ಹಿಂದೂ ಸಂಸ್ಕೃತಿಯನ್ನು ಉಳಿಸುವವರಾದರೆ. ಕೀಳು ಮಟ್ಟದ ಪದಗಳಾದ ಬಾದಾಮಿ.. ಗೋಡಂಬಿ.. ಎಂದು ಹೇಳುತ್ತಿರಲಿಲ್ಲ. ಪಿಎಸ್ ಐ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸಸ್ಪೆಂಡ್ ಅಲ್ಲ, ಡಿಸ್ಮಿಸ್ ಮಾಡಬೇಕು ಎಂದರು.

ಹಿಂದಿನ ಲೇಖನಹಿರಿಯ ನಟಿ ತಾರಾಗೆ ಮಾತೃ ವಿಯೋಗ
ಮುಂದಿನ ಲೇಖನʻಹಿಂದಿ ರಾಷ್ಟ್ರ ಭಾಷೆಯಲ್ಲʼ ಎಂದ ಕಿಚ್ಚ ಸುದೀಪ್‌: ತಿರುಗೇಟು ನೀಡಿ ಕೊನೆಗೆ ತಾವೇ ವಿವಾದಕ್ಕೆ ತೆರೆ ಎಳೆದ ಅಜಯ್‌ ದೇವಗನ್‌