ತೆಲುಗಿನ ‘ನ್ಯಾಚುರಲ್ ಸ್ಟಾರ್’ ನಾನಿ ಅವರು ಅಭಿನಯಿಸುತ್ತಿರುವ 30ನೇ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ‘ಹಾಯ್ ನಾನ್ನ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ನಾನಿ ಜೊತೆ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ಅವರು ನಟಿಸುತ್ತಿದ್ದಾರೆ.
ಇದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗಿನಲ್ಲಿ ‘ಹಾಯ್ ನಾನ್ನ’ ಎಂದರೆ ‘ಹಾಯ್ ಅಪ್ಪ’ ಎಂದರ್ಥ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಒಂದೇ ಶೀರ್ಷಿಕೆ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡವು ತಮಿಳು, ಮಲಯಾಳಂ, ಕನ್ನಡ ಭಾಷೆಯಲ್ಲಿ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆ ಇಟ್ಟಿದೆ.
ಟಾಲಿವುಡ್ನ ‘ಮೆಗಾ ಸ್ಟಾರ್’ ಚಿರಂಜೀವಿ ಅವರ ಆಶೀರ್ವಾದ ಪಡೆದು ಆರಂಭ ಆಗಿರುವ ಈ ಸಿನಿಮಾಗೆ ಶೌರ್ಯುವ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಶೌರ್ಯುವ್ ಅವರಿಗೆ ನಿರ್ದೇಶಕನಾಗಿ ‘ಹಾಯ್ ನಾನ್ನ’ ಮೊದಲ ಸಿನಿಮಾ ಆಗಲಿದೆ. ಹೊಸ ನಿರ್ದೇಶಕನ ಜೊತೆ ಸೇರಿ ನಾನಿ ಮತ್ತು ಮೃಣಾಲ್ ಠಾಕೂರ್ ಅವರು ಕೆಲಸ ಮಾಡುತ್ತಿದ್ದಾರೆ. ಶೀರ್ಷಿಕೆ ನೋಡಿದರೆ ಸಾಕು ಈ ಸಿನಿಮಾದ ಕಥೆ ಏನೆಂದು ಊಹಿಸಬಹುದು. ಇದೊಂದು ಎಮೋಷನಲ್ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ಕಥೆಯನ್ನು ‘ಹಾಯ್ ನಾನ್ನ’ ಚಿತ್ರ ಒಳಗೊಂಡಿದೆ.
ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.
‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ.














