ಮೈಸೂರು(Mysuru): ಹಲಗಲಿ ಗ್ರಾಮದ ಬೇಡರ ಹೋರಾಟ ಸದಾಕಾಲವೂ ಸ್ಫೂರ್ತಿ ಮತ್ತು ಸ್ಮರಣೀಯವೂ ಆಗಿದೆ ಎಂದು ಶಾಸಕ ಎಲ್.ನಾಗೇಂದ್ರ ಸ್ಮರಿಸಿದರು.
ಮೈಸೂರು ನಾಯಕರ ಪಡೆಯಿಂದ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಹಲಗಲಿ ಬೇಡರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಾಗಲಕೋಟೆ ಜಿಲ್ಲೆಯ ಹಲಗಲಿ ಗ್ರಾಮದ ಬೇಡರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮದೇ ರೀತಿಯಲ್ಲಿ ಬಂಡಾಯದ ಕಹಳೆ ಮೊಳಗಿಸಿ, ಬ್ರಿಟಿಷರ ವಿರುದ್ಧ ಜನ ಜಾಗೃತಿ ಮೂಡಿಸಿದ ವೀರ ಸೇನಾನಿಗಳು ಎಂದು ತಿಳಿಸಿದರು.
ಹಲಗಲಿ ಬೇಡರಲ್ಲಿ ಪ್ರಮುಖವಾಗಿ ಪೂಜಾರಿ ಹಣಮಪ್ಪ, ಜಡಗ, ಬಾಲ, ರಾಮ, ಭೀಮ, ದ್ಯಾಮ ಮಂಚೂಣಿಯಲ್ಲಿದ್ದು ಹೋರಾಡಿದರು. ಅವರನ್ನು ಸೋಲಿಸಲು ವಿಫಲವಾದ ಬ್ರಿಟಿಷ್ ಪಡೆಯವರು ನಡುರಾತ್ರಿಯಲ್ಲಿ ಊರಿಗೆ ಬೆಂಕಿ ಹಚ್ಚಿದರು. 23 ಬೇಡರನ್ನು ಬೆಂಕಿ ಹಚ್ಚಿ ಜೀವಂತವಾಗಿ ಕೊಂದರು. ಯಾವ ಸಂಸ್ಥಾನದ ನೆರವನ್ನೂ ಪಡೆಯದೆ ಹೋರಾಡಿದ ವೀರಮಣಿಗಳಾದ ಹಲಗಲಿ ಬೇಡರ ಸಾಹಸ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದು ಎಂದು ಹೇಳಿದರು.
ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ನಗರಪಾಲಿಕೆ ಸದಸ್ಯರಾದ ಆರ್.ರಂಗಸ್ವಾಮಿ, ಎಂ.ಚಿಕ್ಕವೆಂಕಟು, ಮೈಸೂರು ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ರೇವಣ್ಣ, ನಿರ್ದೇಶಕರಾದ ಕೆ.ಉಮಾಶಂಕರ್, ಎಚ್,ಹರೀಶ್ ಕುಮಾರ್, ರಾ.ಸಿದ್ದರಾಮು, ಯತೀಶ್, ಚಾಮರಾಜ, ಬಿಜೆಪಿ ಎಸ್ಟಿ ಮೋರ್ಚಾದ ನಾರಾಯಣಸ್ವಾಮಿ, ಮುಖಂಡರಾದ ಎಲ್.ಚೌಡಪ್ಪ, ಎಂ. ರವಿಕುಮಾರ್, ಮಂಜುನಾಥಪುರಂ ಎಂ. ಮಹೇಶ್, ಅರ್ಜುನ್, ಗೋವಿಂದ, ನಟರಾಜು, ಜಯಣ್ಣ, ದಿನೇಶ್ ಗೌಡ, ಜೆಸಿಬಿ ರವಿ, ಕಿರಣ್, ನಾಗನಾಯಕ, ಚಾಮ, ರಘು, ಪ್ರವೀಣ್, ಲೋಕೇಶ್, ನರಸನಾಯಕ ಇದ್ದರು.