ಧೂಮ್ರ ಕೇತು ಗರ್ಣಾದ್ಯಕ್ಷೋ ಬಾಲಚಂದ್ರೋ ಗಜಾನನಃ।
ವಕ್ರತುಂಡಃ ಶೂರ್ಪಕರ್ಣೋ ಹೇರಂಬಃ ಸ್ಕಂದ ಪೂರ್ವಜಃ॥
ಲಿಂಗ ರೂಪದಲ್ಲಿ ಉದ್ಭವಿಸಿರುವ ಹಲಗೂರಿನ ವಿಶೇಷ ಶ್ರೀ ವರಸಿದ್ಧಿ ವಿನಾಯಕ ದೇವಾಲಯವಿದು.
ಬೆಂಗಳೂರಿನಿಂದ 70 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ 209 ಹಾಗೂ ಮೈಸೂರಿನಿಂದ ಮಳವಳ್ಳಿ ಮಾರ್ಗವಾಗಿ ಹಲಗೂರು ಮುತ್ತತ್ತಿ ರಸ್ತೆಯಲ್ಲಿರುವ ಈ ವಿಶಿಷ್ಟ ದೇವಾಲಯಕ್ಕೆ 100 ವರ್ಷಗಳ ವಿಶೇಷ ಇತಿಹಾಸವಿದೆ..
ಶ್ರೀ ವರಸಿದ್ಧಿ ವಿನಾಯಕನ ಮೊದಲು ಒಂದು ದೊಡ್ಡದಾದಂತಹ ಆಲದ ಮರದ ಕೆಳಗೆ ಪೂಜೆಯನ್ನು ನಡೆಸಿಕೊಳ್ಳುತ್ತಿದ್ದ ಒಂದು ವಿಶೇಷ ವಿಗ್ರಹ. ಹಿಂದೆ ಹಲಗೂರು ಎಂದರೆ ಕತ್ತಿಗಳನ್ನು ತಯಾರಿಸುತ್ತಿದ್ದ ಊರು. ಇತಿಹಾಸದಲ್ಲಿ ಈ ರೀತಿ ಇದೆ. ರಾಜ ಮಹಾರಾಜರುಗಳಿಗೆ ಹಲಗೂರಿನಿಂದ ಕತ್ತಿಗಳನ್ನು ತಯಾರಿಸಿ ತೆಗೆದುಕೊಂಡು ಹೋಗುತ್ತಿದ್ದರು, ಅವರು ಕತ್ತಿಗಳನ್ನು ತೆಗೆದುಕೊಂಡು ಹೋಗುವ ಮುಂಚೆ ಆಲದ ಮರದ ಕೆಳಗಿನ ಶ್ರೀ ಗಣಪತಿಯಲ್ಲಿ ಪ್ರಾರ್ಥಿಸಿ, ಪೂಜೆ ಸಲ್ಲಿಸಿ, ಯಾವ ವಿಘ್ನವೂ ಬಾರದಂತೆ ಬೇಡಿ ಅವರ ವಾಹನಗಳಲ್ಲಿ ರಾಜಮಹಾರಾಜರುಗಳಿಗೆ ತಲುಪಿಸುತ್ತಿದ್ದರು ಎಂದು ಇತಿಹಾಸವಿದೆ.
ಈ ಲಿಂಗ ರೂಪದಲ್ಲಿ ಇರುವಂತಹ ಶ್ರೀ ಗಣೇಶ ವಿಗ್ರಹವು ದಿನೇ ದಿನೇ ಬೆಳೆಯುತ್ತಾ ಬಂದು, ಮೊದಲು ಎರಡು ಕೈಗಳು, ನಂತರ ನಾಲ್ಕು ಕೈಗಳು ಸ್ಪಷ್ಟವಾಗಿ ಕಾಣಿಸುತ್ತಾ ಬಂದು, ಆ ಬಂಡೆಕಲ್ಲು ಬೆಳೆಯುತ್ತಾ ಇದೆ ಎಂದು ಪ್ರತ್ಯಕ್ಷವಾಗಿ ಕಂಡ ಹಲಗೂರಿನ ಭಕ್ತಾದಿಗಳು ಹೇಳಿದ್ದಾರೆ.
ನಲವತ್ತ ಐದು ವರ್ಷಗಳ ಹಿಂದೆ, ಹಲಗೂರಿನ ಗ್ರಾಮದವರು ಆದಂತಹ ದಿವಂಗತ ಶ್ರೀ ಬಸವರಾಜ್ ರವರು ಈ ದೇವಾಲಯವನ್ನು ಸುಂದರವಾಗಿ ಮಂಗಳೂರು ತುಳುನಾಡಿನ ಶೈಲಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಮಹಾ ವರಸಿದ್ಧಿ ವಿನಾಯಕನ ದೇವಸ್ಥಾನದಲ್ಲಿ ವಿಶೇಷವಾಗಿ ಪ್ರತಿ ತಿಂಗಳು ಸಂಕಷ್ಟಹರ ಗಣಪತಿಯನ್ನು ಹಲಗೂರಿನ ಅಕ್ಕಪಕ್ಕದ ಗ್ರಾಮಸ್ಥರು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಅಂಗಾರಕ ಚೌತಿಯ ವಿಶೇಷ ದಿನದಂದು ಮಹಾಗಣಪತಿಗೆ ವಿಶೇಷವಾದ ಹೋಮ-ಹವನಗಳನ್ನು ವಿಜ್ರಂಬಣೆಯಿಂದ ಮಾಡುತ್ತಾರೆ. ಚೌತಿಯಂದು ಮಹಾ ಗಣಪತಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರವನ್ನು ಮಾಡುತ್ತಾರೆ. ಭಕ್ತಾದಿಗಳು ಹರಕೆ ಸಲ್ಲಿಸುವುದರ ಮೂಲಕ ಗಣಪತಿಗೆ ಅಲಂಕಾರವನ್ನು ಮಾಡಿಸುತ್ತಾರೆ. ಗಣಪತಿ ಶೀಘ್ರವಾಗಿ ಪ್ರಸಾದ ರೂಪದಲ್ಲಿ ಕೆಲಸವನ್ನು ಮಾಡಿಕೊಡುತ್ತಾನೆ.
ವಿಶೇಷವಾಗಿ ಮಂಗಳವಾರ ಮಹಾ ಗಣಪತಿಗೆ ಬೆಣ್ಣೆ ಅಲಂಕಾರವಿರುತ್ತದೆ. ಮತ್ತು ಭಕ್ತಾದಿಗಳು ಗಣೇಶನಿಗೆ ಬೆಲ್ಲದ ಆರತಿಯನ್ನು ಮಾಡುವ ಸಂಪ್ರದಾಯವಿದೆ.
ಗಣಪತಿ ಹಬ್ಬದಲ್ಲಿ ಗಣೇಶನ ಮೂರ್ತಿಯನ್ನು ತಂದು, ಪಕ್ಕದಲ್ಲಿ ಇದ್ದ ಬಸವನಗುಡಿಯಲ್ಲಿ ವಿಶೇಷವಾಗಿ ಏಳು ದಿನ ಅಥವಾ 9 ದಿನ ಗಣಪತಿಯನ್ನು ಸ್ಥಾಪಿಸಿ ವಿಜೃಂಭಣೆಯಿಂದ ಹಲಗೂರಿನ ಶ್ರೀ ವೀರಶೈವ ಸಮಾಜದವರು ಮತ್ತು ಶ್ರೀ ವಿನಾಯಕ ಮಿತ್ರ ಮಂಡಳಿಯವರು ಈ ಕಾರ್ಯವನ್ನು ನೆರವೇರಿಸಿ ಗಣಪತಿಯನ್ನು ವಿಸರ್ಜಿಸುತ್ತಾರೆ. ಹಿಂದೆ ಪೂರ್ವಿಕರು ಮಾಡಿಕೊಂಡು ಬಂದ ಕೈಂಕರ್ಯವನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ.
ಇನ್ನೊಂದು ವಿಶೇಷವೆಂದರೆ ಈ ದೇವಸ್ಥಾನದಲ್ಲಿ ಯಾವುದಾದರೂ ಸಂಕಲ್ಪ ಮಾಡಿಕೊಂಡು ಬಂದರೆ ಆ ಕಾರ್ಯವು ಅತೀ ಶೀಘ್ರದಲ್ಲಿ ನೆರವೇರುತ್ತದೆ.
ದಿವಂಗತ ಶ್ರೀ ಬಸವರಾಜ್ ಅವರು ಎಲ್ಲಾ ಹಬ್ಬಗಳಲ್ಲಿ ಮಹಾ ಗಣಪತಿಗೆ ವಿಶೇಷವಾಗಿ ಹೂವಿನ ಅಲಂಕಾರದಿಂದ ಹಿಡಿದು ಎಲ್ಲಾ ಪೂಜೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಈಗಲೂ ಅವರ ಮೊಮ್ಮಕ್ಕಳು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಹಲಗೂರಿನ ಗ್ರಾಮದ ಅಕ್ಕ ಪಕ್ಕದವರು ಯಾವುದೇ ಹಬ್ಬ, ಗೃಹಪ್ರವೇಶ, ಮದುವೆ ಇಂತಹ ಸಮಾರಂಭಗಳ ಮೊದಲು ಗಣಪತಿಗೆ ಪೂಜೆ ಸಲ್ಲಿಸಿ, ನಂತರ ಕಾರ್ಯವನ್ನು ಮನೆಯಲ್ಲಿ ಪ್ರಾರಂಭಿಸುತ್ತಾರೆ.
ಈ ದೇವಾಲಯವು ಮುತ್ತತ್ತಿಗೆ ಹೋಗುವ ಮೊದಲು ಸಿಗುವುದರಿಂದ ಮುತ್ತತ್ತಿಗೆ ಹೋಗುವ ಎಲ್ಲಾ ಭಕ್ತಾದಿಗಳು ಗಣೇಶನ ದರ್ಶನ ಪಡೆದು ಮುಂದೆ ಸಾಗುತ್ತಾರೆ. ಬಹಳ ಪ್ರಮುಖ ವ್ಯಕ್ತಿಗಳು ದೇವಾಲಯಕ್ಕೆ ಬಂದು ದರ್ಶನ ಪಡೆದಿದ್ದಾರೆ.
ಹಲಗೂರಿನ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರು ಸಹ ಮೊದಲು ಮಹಾ ಗಣಪತಿಗೆ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮವನ್ನು ಆರಂಭಿಸುತ್ತಾರೆ.
ಮತ್ತೊಂದು ವಿಶೇಷವೆಂದರೆ ಮದುವೆಯಾಗದ ವಧು-ವರರು ಈ ದೇವಸ್ಥಾನಕ್ಕೆ ಬಂದು ಸ್ವಯಂವರ ಪೂಜೆ ಮಾಡಿಸಿ, ಅತಿ ಶೀಘ್ರದಲ್ಲಿ ಕಂಕಣ ಭಾಗ್ಯ ಕೂಡಿ ಬರುವುದು ಇಲ್ಲಿಯ ಒಂದು ವಿಶೇಷ.
ಈ ಮಹಾವಿನಾಯಕನ ಗುಡಿ ಎಂದು ಪ್ರಸಿದ್ಧವಾದ ಇಲ್ಲಿನ ಅರ್ಚಕರಾದ ಶ್ರೀಯುತ ಎಸ್ಎಂ ಪ್ರಸಾದ್ ಶಾಸ್ತ್ರಿಗಳು ಮತ್ತು ಅವರ ವರ್ಗದವರು ಶ್ರೀ ಮಹಾ ಗಣಪತಿಯ ಪೂಜೆಯನ್ನು ಅತಿಶ್ರದ್ಧಾ ಭಕ್ತಿಗಳಿಂದ ಪೂಜೆಯನ್ನು ಸಲ್ಲಿಸುತ್ತಾ ಮಹಾಭಕ್ತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.