ಮನೆ ರಾಜಕೀಯ ಸಿ.ಡಿ.ಪ್ರಕರಣ ಸಿಬಿಐಗೆ ವಹಿಸಿ: ರಮೇಶ ಜಾರಕಿಹೊಳಿ ಒತ್ತಾಯ

ಸಿ.ಡಿ.ಪ್ರಕರಣ ಸಿಬಿಐಗೆ ವಹಿಸಿ: ರಮೇಶ ಜಾರಕಿಹೊಳಿ ಒತ್ತಾಯ

0

ಬೆಳಗಾವಿ(Belagavi): ಸಿ.ಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಸಿ.ಡಿ ಪ್ರಕರಣದಲ್ಲಿರುವ ಆ ಹುಡುಗಿ, ಶ್ರವಣ್‌ ಮತ್ತು ನರೇಶ್‌, ಕನಕಪುರದ ಗ್ರಾನೈಟ್‌ ಉದ್ಯಮಿ, ಅವನ ಕಾರ್ ಚಾಲಕ ಪರಶಿವಮೂರ್ತಿ, ಮಂಡ್ಯದ ಇಬ್ಬರು ನಾಯಕರು ಆರೋಪಿಗಳು. ಹಾಗಾಗಿ, ಈ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಡಿಕೆಶಿ ಗ್ಯಾಂಗ್ ಬಂಧಿಸಿ

ರಾಜ್ಯದ ಹಲವು ರಾಜಕಾರಣಿಗಳು, ಅಧಿಕಾರಿಗಳ ಬದುಕು ಹಾಳು ಮಾಡಲು ಡಿ.ಕೆ.ಶಿವಕುಮಾರ 110 ಸಿ.ಡಿ.ಗಳನ್ನು ಮಾಡಿಸಿದ್ದಾನೆ. ಇದರ ಬಗ್ಗೆ ಸ್ಪಷ್ಟ ದಾಖಲೆಗಳು ನನ್ನ ಬಳಿ ಇವೆ. ಎಲ್ಲವನ್ನೂ ಸಿಬಿಐ ಅಧಿಕಾರಿಗಳಿಗೆ ನೀಡುತ್ತೇನೆ. ತಕ್ಷಣವೇ ಡಿಕೆಶಿ ಮತ್ತು ಅವನ ಗ್ಯಾಂಗ್‌ ಬಂಧನವಾಗಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನನ್ನ ಹಾಗೂ ಯುವತಿಗೆ ಸಂಬಂಧಿಸಿದ ಸಿ.ಡಿ ಮಾಡಿಸಿದ್ದು ಇದೇ ಮಹಾನಾಯಕ. ರಮೇಶ ಜಾರಕಿಹೊಳಿಯನ್ನು ಜೈಲಿಗೆ ಕಳಿಸಲು ₹40 ಕೋಟಿ ಖರ್ಚು ಮಾಡುತ್ತೇನೆ ಎಂದು ಮಹಾನಾಯಕ ಹೇಳಿದ ಆಡಿಯೊ ನನ್ನ ಬಳಿ ಇದೆ. ಯಾರ್‍ಯಾರ ಜೀವನ ಹಾಳು ಮಾಡಲು ಏನೇನು ಮಾಡಿದ್ದಾನೆ ಎಂಬ ದಾಖಲೆಗಳೂ ಇವೆ ಎಂದು ಹೇಳಿದರು.

ಡಿಕೆಶಿ ಮತ್ತು ನಾನು 1987ರಿಂದ ರಾಜಕೀಯ ಆರಂಭಿಸಿದ್ದೇವು. ಹರಕು ಚಪ್ಪಲಿ ಹಾಕಿಕೊಂಡು ಬಂದವನು ಭ್ರಷ್ಟಾಚಾರದ ಮೂಲಕ ಸಾವಿರಾರು ಕೋಟಿ ಹಣ ಮಾಡಿಕೊಂಡಿದ್ದಾನೆ. ದುಬೈನಲ್ಲಿ, ಲಂಡನ್‌ನಲ್ಲಿ ಮನೆ ಇದೆ, ಸಾವಿರಾರು ಕೋಟಿ ಹಣ ಇದೆ ಎಂದು ಅವನೇ ಹೇಳಿದ ಧ್ವನಿಮುದ್ರಣ ಕೂಡ ನನ್ನ ಬಳಿ ಇದೆ. ಅದನ್ನೂ ತನಿಖೆಗೆ ನೀಡುತ್ತೇನೆ ಎಂದರು.

ನನ್ನ ಸಿ.ಡಿ ಬರುವುದು ನನಗೆ ಮೂರು ತಿಂಗಳ ಮುಂಚೆಯೇ ಗೊತ್ತಿತ್ತು. ಅದನ್ನು ಇಟ್ಟುಕೊಂಡು ನನ್ನನ್ನು ‘ಬ್ಲ್ಯಾಕ್‌ಮೇಲ್‌’ ಮಾಡಿದರು. ದೊಡ್ಡ ಪ್ರಮಾಣದ ಆರ್ಥಿಕ ಅವ್ಯವಹಾರ ಮಾಡಲು ಯತ್ನಿಸಿದರು. ಆದರೆ, ನಾನು ಸರ್ಕಾರಕ್ಕೆ ಹಾನಿ ಮಾಡಲಿಲ್ಲ. ನನ್ನ ರಾಜಕೀಯ ಜೀವನಕ್ಕೆ ಹಾನಿ ಮಾಡಿಕೊಂಡೆ ಎಂದರು.

ನಾನು– ಡಿಕೆಶಿ ಒಳ್ಳೆಯ ಸ್ನೇಹಿತರಾಗಿದ್ದೇವು. ಬೆಂಗಳೂರಿನ ಶಾಂತಿನಗರ ಕೋ ಆಪ್‌ ಸೊಸೈಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ನಮ್ಮ ಮಧ್ಯೆ ಬಿರುಕು ಮೂಡಿತು. ಬೆಂಗಳೂರಿನಲ್ಲಿ 66 ಎಕರೆ ಜಾಗಕ್ಕೆ ಸಂಬಂಧಿಸಿದ ₹ 10 ಸಾವಿರ ಕೋಟಿಯ ವ್ಯವಹಾರ ಅದು. ನಾನು ಸಹಕಾರ ಸಚಿವ ಇದ್ದಾಗ ಆ ’ಫೈಲ್‌ ಕ್ಲಿಯರ್‌’ ಮಾಡಿಕೊಡು ಎಂದು ಡಿಕೆಶಿ ಗಂಟುಬಿದ್ದ. ನಾನು ‘ಓಕೆ’ ಮಾಡಲಿಲ್ಲ. ಅಂದಿನಿಂದ ಶುರುವಾದ ಜಗಳ ಇಲ್ಲಿಗೆ ಬಂದು ನಿಂತಿದೆ ಎಂದೂ ಹೇಳಿದರು.

ಡಿ.ಕೆ.ಶಿವಕುಮಾರ ಅವ್ಯವಹಾರದ ಆಡಿಯೊ ತಮ್ಮ ಬಳಿ ಇದೆ ಎಂದು ಹೇಳಿದ ರಮೇಶ ಜಾರಕಿಹೊಳಿ ಅದನ್ನು ಕೇಳಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.