ಮನೆ ರಾಜಕೀಯ ತಮಿಳುನಾಡು ಸರ್ಕಾರಕ್ಕೆ ಪುರಾತನ ವಿಗ್ರಹಗಳು ಹಸ್ತಾಂತರ

ತಮಿಳುನಾಡು ಸರ್ಕಾರಕ್ಕೆ ಪುರಾತನ ವಿಗ್ರಹಗಳು ಹಸ್ತಾಂತರ

0

ನವದೆಹಲಿ(New Delhi): ತಮಿಳುನಾಡಿನ ವಿವಿಧ ದೇಗುಲಗಳಿಂದ ಕಳುವಾಗಿದ್ದ ಪುರಾತನ ಕಾಲದ 10ಕ್ಕೂ ಹೆಚ್ಚು ವಿಗ್ರಹಗಳನ್ನು ಬುಧವಾರ ತಮಿಳುನಾಡು ಸರಕಾರಕ್ಕೆ ಕೇಂದ್ರ ಸರ್ಕಾರ ಹಸ್ತಾಂತರ ಮಾಡಿದೆ.

ಅರವತ್ತರ ದಶಕದಿಂದ ಹಿಡಿದು 2008ರವರೆಗೆ ಈ ಹತ್ತು ವಿಗ್ರಹಗಳನ್ನು ತಮಿಳುನಾಡಿನ ವಿವಿಧ ದೇವಸ್ಥಾನಗಳಿಂದ ಕಳುವು ಮಾಡಿ ಅದನ್ನು ವಿದೇಶಗಳಲ್ಲಿ ಮಾರಿದ್ದರು. ಅಮೆರಿಕದಲ್ಲಿ ಆರು ಮತ್ತು ಆಸ್ಟ್ರೇಲಿಯಾದಲ್ಲಿ 4 ವಿಗ್ರಹಗಳು ದೊರಕಿದ್ದು, ಕಳೆದ ಮೂರು ವರ್ಷಗಳಲ್ಲಿ ಈ ಹತ್ತು ವಿಗ್ರಹಗಳನ್ನು ಕೇಂದ್ರ ಸರಕಾರ ಮರಳಿಪಡೆಯುವಲ್ಲಿ ಯಶಸ್ವಿಯಾಗಿದೆ.

ತಿರುನೆಲ್ವೇಲಿಯ ನಾಲ್ಕು ವಿಗ್ರಹಗಳು:

ತಿರುನೆಲ್ವೇಲಿಯ ದೇವಸ್ಥಾನವೊಂದರಿಂದ 1994ರಲ್ಲಿ ದ್ವಾರಪಾಲಕರ ಕಲ್ಲಿನ ಶಿಲೆಗಳು ಕಳುವಾಗಿದ್ದವು. ಇವು 15 ಅಥವಾ 16ನೇ ಶತಮಾನಕ್ಕೆ ಸೇರಿದ್ದವಾಗಿವೆ. 2020ರಲ್ಲಿ ಆಸ್ಟ್ರೇಲಿಯಾದಿಂದ ಇವುಗಳನ್ನು ಹಿಂಪಡೆಯಲಾಗಿದೆ.

ಇದೇ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ನರಸಿಂಗನದರ ಸ್ವಾಮಿ ದೇವಸ್ಥಾನದಲ್ಲಿದ್ದ ಕನಕಲಮೂರ್ತಿ ಮತ್ತು ನಂದಿಕೇಶವನ ಎರಡು ಲೋಹ ವಿಗ್ರಹಗಳು 1985ರಲ್ಲಿ ಕಳುವಾಗಿದ್ದವು. ಇವು ಅಮೆರಿಕದಲ್ಲಿ ಸಿಕ್ಕಿದ್ದು, ಅಲ್ಲಿಂದ ಮರಳಿಪಡೆಯಲಾಗಿದೆ.

ತಂಜಾವೂರ್ ಮೂರು ವಿಗ್ರಹಗಳು:

ತಂಜಾವೂರ್ ಜಿಲ್ಲೆಯ ಪುಣ್ಣೈನಲ್ಲೂರ್ ಅರುಲ್‌ಮಿಗು ಮಾರಿಯಮ್ಮನ್ ದೇವಸ್ಥಾನದಿಂದ 11ನೇ ಶತಮಾನದ ಹಳೆಯ ನಟರಾಜನ ಕಂಚಿನ ವಿಗ್ರಹ ಅರವತ್ತರ ದಶಕದಲ್ಲಿ ಕಳುವಾಗಿತ್ತು. ಇದು ನ್ಯೂಯಾರ್ಕ್‌ ನ ಏಷ್ಯಾ ಸೊಸೈಟಿ ಮ್ಯೂಸಿಯಂನಲ್ಲಿ ಸಿಕ್ಕಿದೆ. ತಂಜಾವೂರ್‌ ನ ವಾನಮಿಗನಧರ ಸ್ವಾಮಿ ದೇವಸ್ಥಾನದಲ್ಲಿದ್ದ ಶಿವ ಮತ್ತು ಪಾರ್ವತಿಯವರ ಕಂಚಿನ ವಿಗ್ರಹಗಳು ಅಮೆರಿಕದ ಇಂಡಿಯಾನದ ಮ್ಯೂಸಿಯಂವೊಂದರಲ್ಲಿ ಪತ್ತೆಯಾಗಿದೆ.

ಅರಿಯಾಲೂರ್ ಎರಡು ವಿಗ್ರಹಗಳು:

ಅರಿಯಾಲೂರು ಜಿಲ್ಲೆಯ ಸುತ್ತಮಲ್ಲಿ ಗ್ರಾಮದಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನದಿಂದ ನಾಪತ್ತೆಯಾಗಿದ್ದ ನಾಲ್ಕು ಕೈಗಳ ವಿಷ್ಣು ಮತ್ತು ಶ್ರೀ ದೇವಿಯರ ವಿಗ್ರಹಗಳು ನ್ಯೂಯಾರ್ಕ್‌ನ ವಸ್ತುಸಂಗ್ರಹಾಲಯವೊಂದರಲ್ಲಿ ಸಿಕ್ಕಿದ್ದವು.

ನಾಗಪಟ್ಟಿಣಂನಿಂದ ಎರಡು ವಿಗ್ರಹಗಳು:

ನಾಗಪಟ್ಟಿಣಂ ಜಿಲ್ಲೆಯ ದೇವಸ್ಥಾನಗಳಿಂದ ಸಂಬಂದರ್ ಋಷಿಯ ಬಾಲಾವತಾರದ ಎರಡು ಲೋಹ ವಿಗ್ರಹಗಳು ಕಳುವಾಗಿದ್ದವು. ಇದರಲ್ಲಿ ಒಂದು ಸಯವಣೀಸ್ವರರ್ ದೇವಸ್ಥಾನದಿಂದ ನಾಪತ್ತೆಯಾಗಿತ್ತು. ಆಸ್ಟ್ರೇಲಿಯಾ ಸರಕಾರ ಈ ಎರಡು ವಿಗ್ರಹಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು.