ಮನೆ ದೇವಸ್ಥಾನ ಹನುಮಂತನಗರ ಕುಮಾರಸ್ವಾಮಿ ದೇವಾಲಯ

ಹನುಮಂತನಗರ ಕುಮಾರಸ್ವಾಮಿ ದೇವಾಲಯ

0

ಬಸವನಗುಡಿ ಪಕ್ಕದಲ್ಲೇ ಇರುವ ಹನುಮಂತನಗರ ಹಲವು ಸುಂದರ ದೇವಾಲಯಗಳ ಬೀಡು. ಇಲ್ಲಿರುವ ಸುಬ್ರಹ್ಮಣ್ಯ ಅಥವಾ ಕುಮಾರಸ್ವಾಮಿ ದೇವಾಲಯ ಬಹಳ ಪ್ರಖ್ಯಾತ. ಈ ದೇವಸ್ಥಾನದ ಇತಿಹಾಸ ಸುಮಾರು 400 ವರ್ಷಗಳಿಗೂ ಮಿಗಿಲು.

Join Our Whatsapp Group

ಹನುಮಂತನಗರದ ಎತ್ತರವಾದ ಬೆಟ್ಟದ ಮೇಲೆ ಈಗಿರುವ ಭವ್ಯ ದೇವಾಲಯದ ಜಾಗದಲ್ಲಿ ಹಿಂದೆ ಮಾಗಡಿ ಕೆಂಪೇಗೌಡರು ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿ, ಪುಟ್ಟದೊಂದು ಮಂಟಪ ಕಟ್ಟಿಸಿದ್ದರಂತೆ. ನಂತರದ ದಿನಗಳಲ್ಲಿ ನರಹರಿರಾಯರು ಲಿಂಗದ ಮುಂಭಾಗದಲ್ಲಿ ಮಂಟಪ ಹಾಗೂ ಗೋಪುರ ಕಟ್ಟಿಸಿದರಂತೆ. ಹೀಗಾಗೇ ಈ ಗುಡ್ಡಕ್ಕೆ ನರಹರಿರಾಯರ ಗುಡ್ಡ ಎಂಬ ಹೆಸರು ಬಂದಿದೆ.

ಈ ದೇವಾಲಯಕ್ಕೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇನಾಂ ಜಮೀನು ನೀಡಿ ಅಭಿವೃದ್ಧಿ ಪಡಿಸಿದರು.

ಈ ಪುಣ್ಯಕ್ಷೇತ್ರದಲ್ಲಿ ಉದ್ಭವ ಲಿಂಗ ಹಾಗೂ ಉದ್ಭವ ಆದಿಶೇಷನ ವಿಗ್ರಹವಿದೆ. ದೇವಾಲಯಕ್ಕೆ ಹೋಗಲು ಪಂಚಮುಖಿ ಗಣಪತಿ ದೇವಾಲಯದ ಕಡೆಯಿಂದ 500ಕ್ಕೂ ಹೆಚ್ಚು ಮೆಚ್ಚಿಲುಗಳಿವೆ. ಮೆಟ್ಟಿಲು ಏರುತ್ತಾ ಸಾಗಿದರೆ ಮಾರ್ಗಮಧ್ಯದಲ್ಲಿ  ಎಡಭಾಗದಲ್ಲಿ ಕುಮಾರಧಾರಾ ಎಂಬ ಜಲಾಶ್ರಯವಿದೆ. ಇಲ್ಲಿ  ಸುಬ್ರಹ್ಮಣ್ಯನ ಪುಟ್ಟ ಗುಡಿಯೂ ಇದೆ. ಇಲ್ಲಿಂದು ಮುಂದೆ ಸಾಗಿದರೆ ಎಡಭಾಗದಲ್ಲಿ ಉದ್ಭವ ಆದಿಶೇಷನ ಗುಡಿ ಇದೆ. ಏಳು ಹೆಡೆಯ ಆದಿಶೇಷನ ಮೂರ್ತಿ ಇಲ್ಲಿದ್ದು, ಇದು ಬೆಟ್ಟದ ಶಿಲೆಯಲ್ಲಿ ಸ್ವಯಂ ರೂಪ ತಳೆದಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಆದಿಶೇಷನ ದರ್ಶನ ಪಡೆದು ವಿರಮಿಸಿಕೊಂಡು ಬೆಟ್ಟವೇರಿದರೆ, ಹೊಸದಾಗಿ ನಿರ್ಮಿಸಲಾದ 108 ಅಡಿ ಎತ್ತರದ 7 ಅಂತಸ್ತಿನ ಸುಂದರವಾದ ರಾಜಗೋಪುರವುಳ್ಳ ಭವ್ಯ ದೇವಾಲಯವಿದೆ.

ದೇವಾಲಯದ ಗೋಪುರ ರಮಣೀಯವಾಗಿದೆ. 2009ರಲ್ಲಿ ನವೀಕರಣ ಮಾಡಲಾದ ಹೊಸ ದೇವಾಲಯದ ಗರ್ಭಗೃಹದಲ್ಲಿ ಸುಂದರವಾದ ಕುಮಾರಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಕುಮಾರಸ್ವಾಮಿಯ ಮುಂದೆ ಶಿವಲಿಂಗವಿದೆ. ದೇವರ ಬಲಭಾಗದಲ್ಲಿ ಸೋದರ ಗಣಪನ ಮೂರ್ತಿ ಹಾಗೂ ಎಡಭಾಗದಲ್ಲಿ ಪ್ರಸನ್ನ ಪಾರ್ವತಿ ದೇವಿಯ ಗರ್ಭಗೃಹಗಳಿವೆ.

ಈ ಹಿಂದೆ ಇಲ್ಲಿ 1956ರ ಆಷಾಡ ಮಾಸದಲ್ಲಿ ಸುಬ್ರಹ್ಮಣ್ಯನ ಜನ್ಮನಕ್ಷತ್ರವಾದ ಕೃತ್ತಿಕೆ ನಕ್ಷತ್ರವಿದ್ದಾಗಲೇ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಈಗ 2009ರ ಜೂನ್ ತಿಂಗಳ 16ರಿಂದ 18ರವರೆಗೆ ನಡೆದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ  ಜಗದ್ಗುರು ಶಂಕರಾಚಾರ್ಯ ದಕ್ಷಿಣಾನ್ಮೇಯ ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ದೇವರುಗಳ ಪ್ರತಿಷ್ಠಾಪನೆ ನೆರವೇರಿತು. ಹಿಂದೆ ಈ ದೇವಾಲಯದಲ್ಲಿದ್ದ ಹಾಗೂ ಭಿನ್ನವಾಗಿದ್ದ ದೇವತಾ ವಿಗ್ರಹಗಳನ್ನು ಸಮುದ್ರಕ್ಕೆ ಬಿಡಲಾಯಿತು.

ಹಿಂದೆ ಇಲ್ಲಿದ್ದ ಕುಮಾರಸ್ವಾಮಿಯ ಮೂರ್ತಿಯನ್ನು ಗರ್ಭಗೃಹದ ಮುಂದಿರುವ ಪ್ರಾಕಾರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ನವಗ್ರಹಗಳ ಗುಡಿ ಇದೆ. ಬೆಳ್ಳಿಯ ಕವಚದ ಅಲಂಕಾರದಲ್ಲಿ ವಿಗ್ರಹಗಳ ಸೊಬಗು ನೂರ್ಮಡಿಗೊಳ್ಳುತ್ತದೆ.

ಪ್ರತಿವರ್ಷ ಆಷಾಡ ಮಾಸದಲ್ಲಿ ಆಡಿಕೃತ್ತಿಕೆ ಉತ್ಸವ ನಡೆಯುತ್ತದೆ. ತಮಿಳುನಾಡಿನಿಂದಲೂ ಭಕ್ತರು ಆಗಮಿಸುತ್ತಾರೆ. ಕಾವಡಿ ಹೊತ್ತು ಹರೋ ಹರ ಎಂದು ದೇವರಿಗೆ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಕಾರ್ತೀಕ ಮಾಸದಲ್ಲಿ ಇಲ್ಲಿ ಲಕ್ಷ ದೀಪೋತ್ಸವವೂ ಜರುಗುತ್ತದೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ಪಡಿ ಉತ್ಸವ ನಡೆಯುತ್ತದೆ. ಪ್ರತಿಮಂಗಳವಾರ ಹಾಗೂ ಷಷ್ಠಿಯಂದು ಹಾಗೂ ಸುಬ್ರಹ್ಮಣ್ಯ ಷಷ್ಠಿಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಮೆಟ್ಟಿಲುಗಳನ್ನು ಏರುವ ಮೊದಲೇ ಪಂಚಮುಖ ವಿನಾಯಕನ ದರ್ಶನವಾಗುತ್ತದೆ. ದೇವಾಲಯದ ಎದುರು ಅಶ್ವತ್ಥಕಟ್ಟೆ ಹಾಗೂ ಆಂಜನೇಯನ ದೇವಸ್ಥಾನವಿದೆ.