ಹನೂರು (ಚಾಮರಾಜನಗರ): ಮಹಿಳೆಯ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ವ್ಯಕ್ತಿಯೊಬ್ಬ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆಯಲ್ಲಿ ನಡೆದಿದೆ.
ನಾಗಮಲೆಯಲ್ಲಿ ವಾಸವಿದ್ದ ಲಕ್ಷ್ಮಿ (35) ಹತ್ಯೆಗೀಡಾದ ಮಹಿಳೆ.
ಆತ್ಮಹತ್ಯೆ ಮಾಡಿಕೊಂಡವನನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವೀರಭದ್ರಯ್ಯಚಯನ ಹಳ್ಳಿಯ ಮುನಿರಾಜು (40) ಎಂದು ಗುರುತಿಸಲಾಗಿದೆ.
ಮಹಿಳೆ ಮೇಲೆ ಕಲ್ಲು ಎತ್ತಿ ಹಾಕಿದ ನಂತರ ಆಕೆಯನ್ನು ತೊಡೆ ಮೇಲೆ ಮಲಗಿಸಿ, ವಿಡಿಯೊ ಚಿತ್ರೀಕರಿಸಿ ಫೇಸ್’ಬುಕ್ ಸ್ಟೋರಿಯಾಗಿ ಅಪ್’ಲೋಡ್ ಮಾಡಿದ್ದಾನೆ. ನಾನೇ ಕೊಲೆ ಮಾಡಿರುವುದಾಗಿ ವಿಡಿಯೊದಲ್ಲಿ ಆತ ಹೇಳಿಕೊಂಡಿದ್ದಾನೆ. ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಂಗಳವಾರ ಈ ಘಟನೆ ನಡೆದಿದೆ.
ಘಟನೆಯ ವಿವರ: ತಮಿಳುನಾಡಿನ ಪೆನ್ನಾಗರಂ ಚೆಕ್ ಪೋಸ್ಟ್’ನಲ್ಲಿ ವಾಸವಿದ್ದ ಲಕ್ಷ್ಮಿಗೆ ಈ ಹಿಂದೆಯೇ ಮದುವೆಯಾಗಿತ್ತು. ಹಲವು ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟಿದ್ದಳು. ಬಳಿಕ ಮುನಿರಾಜುನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಕ್ಷ್ಮಿಯು ತನ್ನಿಂದ ದೂರವಾಗಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಾಗಮಲೆಯ ರಮೇಶ್ ಎಂಬುವವರು ಏಳು ತಿಂಗಳ ಹಿಂದೆ ಲಕ್ಷ್ಮಿಯೊಂದಿಗೆ ಕೂಡಾವಳಿ (ಪುನರ್ ವಿವಾಹ) ಮಾಡಿಕೊಂಡಿದ್ದರು. ಲಕ್ಷ್ಮಿಯು ರಮೇಶ್ ಅವರ ಮಾವ–ಅತ್ತೆಯ ಮಗಳು. ತಿಂಗಳ ಹಿಂದೆ ಆಕೆಯನ್ನು ಪೆನ್ನಾಗರಂನಿಂದ ಕರೆದುಕೊಂಡು ಬಂದು ನಾಗಮಲೆಯ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಮಂಗಳವಾರ ಲಕ್ಷ್ಮಿಯನ್ನು ಹುಡುಕಿಕೊಂಡು ಬಂದಿದ್ದ ಮುನಿರಾಜು ನಾಗಮಲೆಯಲ್ಲಿ ಆಕೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ.
ಈ ಸಂದರ್ಭದಲ್ಲಿ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಬೊಮ್ಮ ಎಂಬುವವರ ಜಮೀನಿನಲ್ಲಿ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ಬೆಟ್ಟದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.