ಮನೆ ರಾಜ್ಯ ಹನೂರು: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

ಹನೂರು: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

0

ಹನೂರು(Hanur): ನಿರಂತರ ಜ್ಯೋತಿ ಯೋಜನೆಯಡಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ತಾಲೂಕಿನ ಮಾಲಿಂಗನತ್ತ ಗ್ರಾಮಸ್ಥರು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದಾರೆ.

ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಲಿಂಗನತ್ತ ಗ್ರಾಮದಲ್ಲಿ ಸುಮಾರು 60 ಕುಟುಂಬಗಳಿದ್ದು, 250 ಕ್ಕೂ ಹೆಚ್ಚು  ಜನಸಂಖ್ಯೆಯನ್ನು ಹೊಂದಿದೆ.

ಲೊಕ್ಕನಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ  ನಿರಂತರ ವಿದ್ಯುತ್ ನೀಡಲು  ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ, ನಲ್ಲಿಮರದ ದೊಡ್ಡಿ, ಹಾವಿನ ಮೂಲೆ ಸೇರಿದಂತೆ ಮಾಲಿಂಗನತ್ತ ಗ್ರಾಮದ ನಿವಾಸಿಗಳು ನಿರಂತರ ವಿದ್ಯುತ್ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಗ್ರಾಮಗಳ ಮುಖಾಂತರವೇ ಇತರೆ ಗ್ರಾಮಗಳಿಗೆ ನಿರಂತರ ಯೋಜನೆಯಡಿ  ವಿದ್ಯುತ್ ಪೂರೈಕೆಯಾಗುತ್ತಿದೆ ಆದರೆ ಈ ಗ್ರಾಮಗಳಿಗೆ ಸಂಪರ್ಕ ನೀಡದೆ ಮುಂದಿನ ಗ್ರಾಮಗಳಿಗೆ ವಿದ್ಯುತ್ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ .

ವಿದ್ಯಾರ್ಥಿ ಜಡೆ ಸ್ವಾಮಿ ಮಾತನಾಡಿ ಗ್ರಾಮದಲ್ಲಿ ವಿದ್ಯುತ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ  ತೊಂದರೆ ಆಗಿದೆ ದಯವಿಟ್ಟು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೆಸ್ಕಾಂ ಎಇಇ ಶಂಕರ್, ಲೋಕನಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳಿಗೆ ನಿರಂತರ ವಿದ್ಯುತ್ ಯೋಜನೆ ಯಡಿ ವಿದ್ಯುತ್ ಪೂರೈಸಲು ಡಿಪಿಆರ್ ಸಿದ್ದಪಡಿಸಿ ಅನುಮೋದನೆಗಾಗಿ ಕಳುಹಿಸಲಾಗಿದೆ. ಟೆಂಡರ್ ಮುಗಿದ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.