ಹನೂರು: ಜಿಂಕೆ ಬೇಟೆಯಾಡಿ ಮಾಂಸ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ನಾಪತ್ತೆಯಾಗಿರುವ ಮತ್ತೋರ್ವನ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಕೃಷ್ಣಮೂರ್ತಿ ಮತ್ತು ಓರ್ವ ಬಾಲಕ ಬಂಧಿತ ಆರೋಪಿಗಳು. ನಾಪತ್ತೆಯಾಗಿರುವ ಗೆಜ್ಜಲನತ್ತ ಗ್ರಾಮದ ಆರ್ಮುಗಂ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶಿಸಿ ಜಿಂಕೆಯನ್ನು ಬೇಟೆಯಾಡಿ ಕೊಂದು ಮಾಂಸ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಕೌದಳ್ಳಿ ವಲಯ ಅರಣ್ಯಾಧಿಕಾರಿ ಸುಂದರ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಜಿಂಕೆ ಬೇಟೆಗೆ ಬಳಸಿದ್ದ ಪರಿಕರಗಳ ವಶಕ್ಕೆ ಪಡೆಯಲಾಗಿದ್ದು, ರಾಮಾಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಮಧುಕುಮಾರ್,ಅರಣ್ಯ ಪಾಲಕರಾದ ಬಿಲ್ಲಪ್ಪ, ಗಣೇಶ್ ಪ್ರಸಾದ್, ಬೀರಪ್ಪ ಹಳ್ಳಿ ಮತ್ತು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಭಾಗವಹಿಸಿದ್ದರು.