ಮನೆ ಸ್ಥಳೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಪರಿಶ್ರಮ, ಶಿಸ್ತು, ಬದ್ಧತೆ ಮುಖ್ಯ: ಕೆ ಲಕ್ಷ್ಮೀ ಪ್ರಿಯಾ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಪರಿಶ್ರಮ, ಶಿಸ್ತು, ಬದ್ಧತೆ ಮುಖ್ಯ: ಕೆ ಲಕ್ಷ್ಮೀ ಪ್ರಿಯಾ

0

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಅಭ್ಯರ್ಥಿಗಳಲ್ಲಿ ಶಿಸ್ತು, ಬದ್ಧತೆ ಹಾಗೂ ನಿರಂತರ ಪರಿಶ್ರಮ ಮುಖ್ಯ ಎಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕರಾದ ಕೆ. ಲಕ್ಷ್ಮಿ ಪ್ರಿಯಾ ಅವರು ತಿಳಿಸಿದರು.

ಇಂದು ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತ ಗಂಗೋತ್ರಿಯಲ್ಲಿ ಹಮ್ಮಿಕೊಂಡಿದ್ದ, ಐಎಎಸ್ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಪರೀಕ್ಷೆ ಕುರಿತು ತಿಳುವಳಿಕೆ ಮುಖ್ಯ. ಪರೀಕ್ಷೆಯ ಮೊದಲ ಹೆಜ್ಜೆ ಪರೀಕ್ಷೆಯ ಬಗ್ಗೆ ತಿಳಿದುಕೊಳ್ಳುವುದು. ಇದಕ್ಕಾಗಿ ನೀವೆಲ್ಲರೂ ಇಲ್ಲಿ ಸೇರಿರುವುದು ಪ್ರಸಂಶನೀಯ ಎಂದರು.

ಇಂತಹ  ಕಾರ್ಯಗಾರಗಳು ನಿಮಗೆ ಓದಲು ಮಾರ್ಗದರ್ಶನವನ್ನು ತಿಳಿಸುತ್ತವೆ ಅಷ್ಟೇ. ಆದರೆ ಈ ಮಾರ್ಗದರ್ಶನದನ್ವಯ ಓದುವ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಪರೀಕ್ಷೆಗಳನ್ನು ಎದುರಿಸುವಲ್ಲಿ ಎಲ್ಲರಿಗೂ ಸಮಾನ ಅವಕಾಶವಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ. ಆದ್ದರಿಂದ ಯಾವುದೇ ರೀತಿಯ ಕೀಳರಿಮೆ ಬೇಡ. ಎಲ್ಲಾ ಸಂದರ್ಭದಲ್ಲಿ ನಮಗೆ ಹೊರಗಡೆಯಿಂದ ಮೋಟಿವೇಶನ್ ಸಿಗಬೇಕೆಂದಿಲ್ಲ. ಹೆಚ್ಚು ಸಮಯ ಸೆಲ್ಫ್ ಮೋಟಿವೇಶನ್ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಣ್ಣು ಮಕ್ಕಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿರುವುದು ನಿಮಗೆಲ್ಲಾ ಮತ್ತಷ್ಟು ಪ್ರೇರಣೆಯಾಗಲಿ. ಓದಿದ್ದನ್ನು ಮತ್ತೆ ಓದಿ ಪುನರ್ಮನನ ಮಾಡಿಕೊಳ್ಳಿ. ಪಠ್ಯಕ್ರಮದನುಸಾರ ಅಗತ್ಯವಿದ್ದಷ್ಟನ್ನು ಓದಿ, ಸಣ್ಣ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಕಾಲೆಳೆಯುವವರ ಬಗೆಗೆ ತಲೆಕೆಡಿಸಿಕೊಳ್ಳಬೇಡಿ. ಪ್ರತಿದಿನ ಹೊಸತನ್ನು ಕಲಿಯಬೇಕೆಂಬ ಹಂಬಲ ನಿಮ್ಮದಾಗಿರಲಿ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಅವರು ಮಾತನಾಡಿ, ಹೆಚ್ಚಿನ ವಿದ್ಯಾರ್ಥಿಗಳು ಗುರಿಯನ್ನು ನಿರ್ಧರಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಜೀವನಕ್ಕೆ ಗುರಿ ನಿರ್ಧಾರ ಬಹಳ ಮುಖ್ಯ. ಪ್ರಾರಂಭದಲ್ಲಿ ಸಣ್ಣಪುಟ್ಟ ಗುರಿಯನ್ನು ನಿರ್ಧರಿಸಿಕೊಳ್ಳಿ. ಅವುಗಳನ್ನು ಸಾಧಿಸಿದ ನಂತರ ಮತ್ತೊಂದು ಗುರಿಯನ್ನು ನಿರ್ಧರಿಸಿ, ಇದರಿಂದ ಜೀವನದ ದೊಡ್ಡ ಗುರಿಗಳನ್ನು ಸಾಧಿಸಲು ಸಹಾಯಕಾರಿ ಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಓದುವುದನ್ನು ಹವ್ಯಾಸ ಮಾಡಿಕೊಳ್ಳಿ. ಇಂದಿನ ವಿದ್ಯಾರ್ಥಿಗಳಲ್ಲಿ ತಾಳ್ಮೆ ಕಡಿಮೆ. ಪರೀಕ್ಷೆಗಳಲ್ಲಿ ಸೋಲನ್ನು ಅನುಭವಿಸುವುದನ್ನು ಕೇಳರಿಮೆಯಾಗಿ ಭಾವಿಸಬೇಡಿ. ನಿಮ್ಮ ಸೋಲನ್ನು ಸಮಾಜಕ್ಕೆ ಬಿಡಿ. ಆಡಿಕೊಳ್ಳುವ ಸಮಾಜಕ್ಕೆ ನಾವು ಜವಾಬ್ದಾರರಲ್ಲ. ಅದಕ್ಕೆ ಬದಲಾಗಿ ಓದುವುದನ್ನು ಮುಂದುವರೆಸಿ, ಸತತ ಪ್ರಯತ್ನ, ಸಮಯ ಪ್ರಜ್ಞೆ ಹಾಗೂ ನಿರಂತರ ಸಿದ್ಧತೆಯಿಂದ ಯಶಸ್ಸನ್ನು ಖಂಡಿತವಾಗಿಯೂ ಸಾಧಿಸಬಹುದು. ಹೊಸ ಚಿಂತನೆಗಳಿಗೆ ಅವಕಾಶ ಕೊಡಿ, ವಿವಿಧ ಮೂಲಗಳಿಂದ ಸಂಪನ್ಮೂಲಗಳನ್ನು ಕಲೆ ಹಾಕಿ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶರಣಪ್ಪ ವಿ ಹಲಸೆ ಅವರು ಮಾತನಾಡಿ ಸ್ವಾಮಿ ವಿವೇಕಾನಂದರ ಮಾತಿನಂತೆ ನಿಮ್ಮ ಗುರಿ ಮುಟ್ಟುವವರೆಗೂ ನೀವು ಎಲ್ಲೂ ನಿಲ್ಲಬೇಡಿ. ಗುರಿಯೆಡೆಗಿನ ನಿಮ್ಮ ಪ್ರಯತ್ನ ಸತತವಾಗಿರಲಿ. ಕಷ್ಟಪಡದೆ ಯಾವುದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಗುರಿ ಸಾಧಿಸಲು ಆತ್ಮ ವಿಶ್ವಾಸ ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಕರಾಮುವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಕೆ ಬಿ ಪ್ರವೀಣ್, ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಜೈನಹಳ್ಳಿ ಸತ್ಯನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.