ನವದೆಹಲಿ (New Delhi)- ‘ಹರ್ ಘರ್ ದಸ್ತಕ್-2.0’ ಆಂದೋಲನದ ಮೂಲಕ ಜುಲೈ 31 ರೊಳಗೆ 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದ 4.7 ಕೋಟಿ ಜನರಿಗೆ ಮುನ್ನೆಚ್ಚರಿಕಾ ಡೋಸ್ ನೀಡುವತ್ತ ಕೇಂದ್ರ ಸರ್ಕಾರ ಗಮನ ಹರಿಸಿದೆ.
ದೇಶದಲ್ಲಿರುವ ಒಟ್ಟಾರೆ 13.75 ಕೋಟಿ ಹಿರಿಯ ನಾಗರಿಕರ ಪೈಕಿ ಜೂನ್ 3ರವರೆಗೆ 11.91 ಕೋಟಿ ಹಿರಿಯ ನಾಗರಿಕರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 6.67 ಕೋಟಿ ಫಲಾನುಭವಿಗಳು ಬೂಸ್ಟರ್ ಡೋಸ್ ಪಡೆಯಬೇಕಿದೆ. 1.94 ಕೋಟಿ ಜನರು ಲಸಿಕೆ ಪಡೆದಿದ್ದಾರೆ. ಏತನ್ಮಧ್ಯೆ, 1.04 ಕೋಟಿ ಹಿರಿಯ ನಾಗರಿಕರು ಇನ್ನೂ ಲಸಿಕೆಯ ಮೊದಲ ಡೋಸ್ ಅನ್ನೇ ಪಡೆದಿಲ್ಲ. ದೇಶದ 27 ರಾಜ್ಯಗಳಲ್ಲಿ 60 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯೋಮಿತಿಯವರು ಶೇ 42ರಷ್ಟು ಮಂದಿ ಮಾತ್ರವೇ ಮುನ್ನೆಚ್ಚರಿಕಾ ಡೋಸ್ ಪಡೆದಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ.
ಈ ಹಿನ್ನೆಲೆಯಲ್ಲಿ ಮನೆ-ಮನೆಗೂ ಭೇಟಿ ನೀಡಿ ಲಸಿಕೆ ನೀಡುವ ಆಂದೋಲನವು ಜೂನ್ 1ರಿಂದ ಆರಂಭವಾಗಿದ್ದು, ಈ ಯೋಜನೆ ಮೂಲಕ 2ನೇ ಡೋಸ್ ಪಡೆಯಬೇಕಿರುವವರು ಮತ್ತು 60 ವರ್ಷ ಮೇಲಿನ ಎಲ್ಲರಿಗೂ ಮುನ್ನೆಚ್ಚರಿಕಾ ಡೋಸ್ ನೀಡಲು ಕ್ರಮ ವಹಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಮನೆ-ಮನೆಗೂ ತೆರಳಿ ಲಸಿಕೆ ನೀಡುವ ಈ ಆಂದೋಲನವು 2 ತಿಂಗಳ ಕಾರ್ಯಕ್ರಮವಾಗಿದೆ.