ದಾವಣಗೆರೆ: ಕೃಷಿ ಪಂಪ್ ಸೆಟ್’ಗಳಿಗೆ ಸಂಪರ್ಕದ ಅನುಮೋದನೆ ನೀಡಲು ಗುತ್ತಿಗೆದಾರರಿಂದ ಆರು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಹರಿಹರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಬಿ.ಎಂ. ಕರಿಬಸಯ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ವಿದ್ಯುತ್ ಗುತ್ತಿಗೆದಾರ, ಹರಿಹರದ ನಿವಾಸಿ ಮಹೇಶ್ವರಪ್ಪ ಬೇವಿನಹಳ್ಳಿ ಎಂಬುವರಿಗೆ ಐಪಿ ಸೆಟ್ ವಿದ್ಯುತ್ ಅನುಮೋದನೆ ನೀಡಲು ಮೊದಲಿಗೆ ಕರಿಬಸಯ್ಯ ಪ್ರತಿ ಒಂದಕ್ಕೆ ಐದು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ ಪ್ರತಿ ಒಂದಕ್ಕೆ ಒಂದು ಸಾವಿರದಂತೆ ಒಪ್ಪಿಕೊಂಡು ಮುಂಗಡವಾಗಿ ಒಂದು ಸಾವಿರ ರೂಪಾಯಿ ಲಂಚ ತೆಗೆದುಕೊಂಡಿದ್ದರು.
ಗುತ್ತಿಗೆದಾರ ಮಹೇಶ್ವರಪ್ಪ ಬೇವಿನಹಳ್ಳಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಗುರುವಾರ ಬೆಸ್ಕಾಂ ಕಚೇರಿಯಲ್ಲೇ ಕರಿಬಸಯ್ಯ ಆರು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಂಜಿನಿಯರ್ ಕರಿಬಸಯ್ಯ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ, ಡಿಎಸ್ಪಿ ರಾಮಕೃಷ್ಣ, ವೃತ್ತ ನಿರೀಕ್ಷಕ ಎಚ್.ಎಸ್. ರಾಷ್ಟ್ರಪತಿ, ಆಂಜನೇಯ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.