ಮನೆ ರಾಷ್ಟ್ರೀಯ ಹರಿಯಾಣ ಚುನಾವಣೆ: 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ

ಹರಿಯಾಣ ಚುನಾವಣೆ: 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ

0

ಚಂಡೀಗಢ: ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚುನಾವಣಾ ಕಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ.

Join Our Whatsapp Group

ಚುನಾವಣಾ ಆಯೋಗವು ಮುಕ್ತ, ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ಒಟ್ಟು 1,031 ಅಭ್ಯರ್ಥಿಗಳು ವಿಧಾನಸಭಾ ಚುನಾವಣಾ ಅಖಾಡದಲ್ಲಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ 2 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಈ ಬಾರಿಯ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪುನಃ ತನ್ನ ತೆಕ್ಕೆಗೆ ಪಡೆಯುವ ನಿರೀಕ್ಷೆಯಲ್ಲಿದೆ. ಬಿಜೆಪಿ, ಎಎಪಿ, ಕಾಂಗ್ರೆಸ್​, ಜೆಜೆಪಿ, ಐಎನ್‌ಎಲ್‌ಡಿ, ಬಿಎಸ್‌ಪಿ ಹಾಗೂ ಎಎಸ್‌ಪಿ ಸೇರಿದಂತೆ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯವು ಇಂದು ಇವಿಎಂಗಳಲ್ಲಿ ಭದ್ರವಾಗಲಿದೆ.

ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರು ತಮ್ಮ ಮೊದಲ ಮತ ಚಲಾಯಿಸಿದರು.

ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಚಾರ್ಖಿ ದಾದ್ರಿಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಕಣದಲ್ಲಿ ಪ್ರಮುಖ ಅಭ್ಯರ್ಥಿಗಳು: ಚುನಾವಣಾ ಕದನದಲ್ಲಿ, ಹಾಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (ಲದ್ವಾ ಕ್ಷೇತ್ರ), ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ (ಗರ್ಹಿ ಸಂಪ್ಲಾ-ಕಿಲೋಯ್), ಮಾಜಿ ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ (ಉಚಾನ ಕಲಾನ್), ಕಾಂಗ್ರೆಸ್​​ನ ವಿನೇಶ್ ಫೋಗಟ್ ಹಾಗೂ ಜೆಜೆಪಿಯ ದುಶ್ಯಂತ್ ಚೌತಾಲಾ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಸ್ವತಂತ್ರ ಅಭ್ಯರ್ಥಿಗಳಲ್ಲಿ, ಹಿಸಾರ್‌ ನಿಂದ ಸ್ಪರ್ಧಿಸುತ್ತಿರುವ ಸಾವಿತ್ರಿ ಜಿಂದಾಲ್, ರಾನಿಯಾದಿಂದ ರಂಜಿತ್ ಚೌತಾಲಾ ಮತ್ತು ಅಂಬಾಲಾ ಕ್ಯಾಂಟ್‌ನಿಂದ ಕಣದಲ್ಲಿರುವ ಚಿತ್ರಾ ಸರ್ವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಬಿಗಿ ಪೊಲೀಸ್​ ಭದ್ರತೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹರಿಯಾಣ ಪೊಲೀಸರು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. 21,196 ಗೃಹರಕ್ಷಕ ದಳದ ಸಿಬ್ಬಂದಿ, 29,462 ಪೊಲೀಸರು ಸೇರಿದಂತೆ 10,403 ಎಸ್‌ಪಿಒಗಳನ್ನು ನಿಯೋಜನೆ ಮಾಡಲಾಗಿದೆ. ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.