ಡಿಕೆಶಿ ವಜಾಕ್ಕೆ ಸಿಎಂಗೆ ನಿರ್ದೇಶನ ನೀಡುವಂತೆ ಕೋರಿದ ಜೆಡಿಎಸ್
ಬೆಂಗಳೂರು: ಹಾಸನ ವಿಡಿಯೋ ಪ್ರಕರಣ ಹಾಗೂ ಪೆನ್ ಡ್ರೈವ್ ಹಂಚಿಕೆ ಬಗ್ಗೆ ರಾಜ್ಯ ಸರಕಾರ ನೇಮಕ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜೆಡಿಎಸ್ ರಾಜ್ಯಪಾಲರಿಗೆ ಮನವಿ ಮಾಡಿದೆ.
ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್ ಡ್ರೈವ್ ಗಳನ್ನು ವ್ಯಾಪಕವಾಗಿ ಹಂಚಿಕೆ ಮಾಡಲಾಗಿರುವ ಪ್ರಕರಣದ ಪಿತೂರಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮಾಸ್ಟರ್ ಮೈಂಡ್ ಆಗಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜೆಡಿಎಸ್ ರಾಜ್ಯಪಾಲರಲ್ಲಿ ಮನವಿ ಮಾಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಪಕ್ಷದ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರಿಗೆ ದೂರು ಸಲ್ಲಿಸಿತು. ಈ ಸಂದರ್ಭದಲ್ಲಿ ಮನವಿ ಪತ್ರದಲ್ಲಿನ ಎಲ್ಲಾ ಅಂಶಗಳನ್ನು ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟರು.
ವಿಶೇಷ ತನಿಖಾ ತಂಡ ಸರಕಾರದ ಹಿತಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ
ವಿಶೇಷ ತನಿಖಾ ತಂಡ (ಎಸ್‌ಐಟಿ) ಸರಿಯಾಗಿ ತನಿಖೆ ಮಾಡುತ್ತಿಲ್ಲ ಹಾಗೂ ನಿಕ್ಷಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲ. ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಅದು ನಿರ್ವಹಿಸುತ್ತಿದೆ ಎಂದು ಜೆಡಿಎಸ್ ಗಂಭೀರ ಆಪಾದನೆ ಮಾಡಿದೆ.
ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಎನ್ನುವ ವ್ಯಕ್ತಿ ವಿಡಿಯೋ ಹಾಗೂ ಚಿತ್ರಗಳನ್ನು ಪ್ರಜ್ವಲ್ ಅವರ ಮೊಬೈಲ್ ಕದ್ದು ಸೋರಿಕೆ ಮಾಡಿದ್ದಾರೆ. ಕಾರ್ತಿಕ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿಯಾಗಿ ಸಂಚು ರೂಪಿಸಿದ್ದರು. ಆದರೆ, ಈವರೆಗೂ ಕಾರ್ತಿಕ್ ನನ್ನು ಬಂಧಿಸಿಲ್ಲ ಎಂದು ಜೆಡಿಎಸ್ ದೂರಿದೆ.
ಹಾಸನ ಸೇರಿದಂತೆ ರಾಜ್ಯಾದ್ಯಂತ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಪ್ರಕರಣದ ಆರೋಪಿಗಳ ಬಗ್ಗೆ ದೂರು ದಾಖಲಾಗಿದ್ದರೂ ಈವರೆಗೆ ಬಂಧಿಸಿಲ್ಲ. ಈ ಕೃತ್ಯದಲ್ಲಿ ನವೀನ್ ಗೌಡ ಎಂಬ ವ್ಯಕ್ತಿ ಭಾಗಿಯಾಗಿದ್ದು, ಹಾಸನದಲ್ಲಿ FIR ಆಗಿದ್ದರೂ ಅವನನ್ನು ತನಿಖಾ ತಂಡ ಬಂಧನ ಮಾಡಿಲ್ಲ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಡಿಯೋಗಳನ್ನು ಎಲ್ಲೆಡೆ ಸೋರಿಕೆ ಮಾಡಿರುವ ಕಿಡಿಗೇಡಿಗಳನ್ನು ಬಂಧನ ಮಾಡಬೇಕು. ಈ ನಿಟ್ಟಿನಲ್ಲಿ ಎಸ್ ಐಟಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್ ಆಪಾದಿಸಿದೆ.
ರಾಜ್ಯ ಸರ್ಕಾರ ಸಂಪೂರ್ಣ ವಿಫಲ
ಮಹಿಳೆಯರ ಮಾನ ಹಾನಿಗೆ ಕಾರಣವಾಗಿರುವ ಅಶ್ಲೀಲ ವಿಡಿಯೋಗಳ ಹಂಚಿಕೆ ಮಾಡುವುದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಕರಣದಲ್ಲಿ ನೊಂದಿರುವ ಮಹಿಳೆಯರಿಗೆ ಇದರಿಂದ ಬಹಳ ಆಘಾತವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಎಸ್ ಐಟಿ ನಡೆಸುತ್ತಿರುವ ತನಿಖೆ ಪಾರದರ್ಶಕವಾಗಿಲ್ಲ ಹಾಗೂ ಏಕಪಕ್ಷೀಯವಾಗಿದೆ ಮಾತ್ರವಲ್ಲ, ಪೂರ್ವಗ್ರಹ ಪೀಡಿತವಾಗಿದೆ. ನೊಂದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಿಸಲಾಗಿದ್ದ ಸುಮಾರು 25 ಸಾವಿರಕ್ಕೂ ಹೆಚ್ಚು ಪೆನ್ ಡ್ರೈವ್ ಗಳ ಸುರಿಮಳೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ನೇರ ಪಾತ್ರವಿದೆ. ಆ ಪೆನ್ ಡ್ರೈವ್ ಗಳನ್ನು ಬಸ್ ನಿಲ್ದಾಣ, ಉದ್ಯಾನವನ ಸೇರಿದಂತೆ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ತಂದು ಹಾಕಲಾಗಿದೆ. ಎಂದು ದೂರಿನಲ್ಲಿ ಪ್ರಮುಖವಾಗಿ ಉಲ್ಲೇಖ ಮಾಡಲಾಗಿದೆ.
ವಕೀಲ, ಬಿಜೆಪಿ ಮುಖಂಡ ದೇವರಾಜ್ ಗೌಡ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ನಡೆದಿರುವ ಮೊಬೈಲ್ ಸಂಭಾಷಣೆಯಲ್ಲಿ ಪೆನ್ ಡ್ರೈವ್ ಸಂಚು ಬಹಿರಂಗವಾಗಿದೆ. ರಾಜ್ಯ ಸರ್ಕಾರ ರಚನೆ ಮಾಡಿರುವ ತನಿಖಾ ತಂಡ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ವರ್ಚಸ್ಸು ಹಾಳು ಮಾಡಲು ಎಸ್ ಐಟಿ ಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ನೇರವಾಗಿ ಆರೋಪಿಸಿದೆ.
ಅದರಿಂದ ಈ ಎಸ್ ಐಟಿ ಯಿಂದ ಈ ಪ್ರಕರಣದ ಪಾರದರ್ಶಕ, ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಇಡೀ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಲು ತಾವು ಮಧ್ಯ ಪ್ರವೇಶ ಮಾಡಬೇಕು ಎಂದು ಜೆಡಿಎಸ್ ರಾಜ್ಯಪಾಲರಲ್ಲಿ ಮನವಿ ಮಾಡಿದೆ.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೇಗೌಡರು, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ.ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಅಲ್ಕೊಡ್ ಹನುಮಂತಪ್ಪ, ಆನಂದ್ ಅಸ್ನೋಟಿಕರ್, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾ ನಾಯಕ್, ಶಾಸಕರಾದ ಕರೆಮ್ಮ ನಾಯಕ್, ರಾಜುಗೌಡ ಪಾಟೀಲ್, ನೇಮಿರಾಜ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಭೋಜೆಗೌಡ, ಮಂಜೇಗೌಡ, ಇಂಚರ ಗೋವಿಂದರಾಜು, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಚೌಡರೆಡ್ಡಿ ತೂಪಲ್ಲಿ, ಡಾ.ಅನ್ನದಾನಿ, ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲಹರವಿ, ಮಹದೇವು, ಪ್ರಸನ್ನ ಕುಮಾರ್, ಮುನೇಗೌಡ, ಆಂಜಿನಪ್ಪ, ಸೂರಜ್ ನಾಯಕ್ ಸೋನಿ ಮುಂತಾದವರು ನಿಯೋಗದಲ್ಲಿ ಇದ್ದರು.