ಹಾಸನ: ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಐಪಿಎಸ್ ಅಧಿಕಾರಿ ಭೀಕರ ಅಪಘಾತದಲ್ಲಿ ಕೊನೆಯುಸಿರೆಳದಿದ್ದಾರೆ.
ಹರ್ಷಬರ್ಧನ್ (26) ಮೃತ ಪ್ರೊಬೇಷನರಿ ಐಪಿಎಸ್ ಅಧಿಕಾರಿ. ಭಾನುವಾರ ಮೈಸೂರು-ಹಾಸನ ರಸ್ತೆಯ ಕಿತ್ತಾನೆ ಗ್ರಾಮದ ಬಳಿ ಹರ್ಷಬರ್ಧನ್ ಅವರಿದ್ದ ಬೋಲೇರೋ ಜೀಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಅಪಘಾತದಲ್ಲಿ ಹರ್ಷಬರ್ಧನ್ ತಲೆಗೆ ತೀವ್ರ ಗಾಯವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತಕ ಉಸಿರಾಟದಲ್ಲಿದ್ದ ಹರ್ಷಬರ್ಧನ್ ಅವರು ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ.
ಬಿಇ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ಹರ್ಷಬರ್ಧನ್ 2023ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ 4 ವಾರಗಳ ಕಾಲ ತರಬೇತಿ ಪೂರ್ಣಗೊಳಿಸಿದ್ದರು. 6 ತಿಂಗಳು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಬೇಕಿತ್ತು. ಆದ್ದರಿಂದ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು.
ನಿನ್ನೆ ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ನಿರ್ಗಮಿಸಿ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಾಸನಕ್ಕೆ ಆಗಮಿಸಬೇಕಿತ್ತು. ಹೀಗಾಗಿ ಇವರನ್ನು ಕರೆತರಲು ಹಾಸನದ ಡಿಎಆರ್ ಪೊಲೀಸ್ ಪೇದೆ ಮಂಜೆಗೌಡ, ಹಾಸನ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಬೋಲೇರೋ ಜೀಪಲ್ಲಿ ಮೈಸೂರಿಗೆ ಹೋಗಿ ಹರ್ಷಬರ್ಧನ್ ಅವರನ್ನು ಕರೆತರುತ್ತಿದ್ದರು. ಅವರು ಹೊಳೆನರಸೀಪುರ ಮಾರ್ಗವಾಗಿ ಹಾಸನಕ್ಕೆ ತಲುಪಬೇಕಿತ್ತು.
ಆದರೆ, ಹಾಸನ ಗಡಿ 3 ಕಿಲೋ ಮೀಟರ್ ಇರುವಾಗಲೇ ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ 3-4 ಪಲ್ಟಿಯಾಗಿ ರಸ್ತೆ ಪಕ್ಕದ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ಐಪಿಎಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕ ಮಂಜೇಗೌಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಹರ್ಷಬರ್ಧನ್ ಕೊನೆಯುಸಿರೆಳೆದಿದ್ದಾರೆ.














