ಮನೆ ರಾಜ್ಯ ಹಾಸನ ಟ್ರಕ್ ಅಪಘಾತ; ಯುವಕರೇ ಸಾವು – ಒಬ್ಬೊಬ್ಬರದು ಕಣ್ಣೀರ ಕಥೆ..!

ಹಾಸನ ಟ್ರಕ್ ಅಪಘಾತ; ಯುವಕರೇ ಸಾವು – ಒಬ್ಬೊಬ್ಬರದು ಕಣ್ಣೀರ ಕಥೆ..!

0

ಹಾಸನ : ಗಣೇಶ ವಿಸರ್ಜನೆ ಸಂಭ್ರಮದಲ್ಲಿದ್ದವರ ಮೇಲೆ ರಕ್ಕಸನಂತೆ ನುಗ್ಗಿದ್ದ ಟ್ರಕ್​​ ವಿದ್ಯಾರ್ಥಿಗಳು ಸೇರಿ 9 ಜನರನ್ನು ಬಲಿ ಪಡೆದಿದೆ. ಈ ಘೋರ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚು. ಮನೆಗೆ ಆಧಾರವಾಗಬೇಕಿದ್ದ ಯುವಕರ ಭೀಕರ ಅಂತ್ಯವಾಗಿದೆ. ಮಕ್ಕಳ ಕಳೆದುಕೊಂಡ ಹೆತ್ತವರ ಕಣ್ಣೀರ ಕೋಡಿ ಒಡೆದಿದೆ. ಮೃತಪಟ್ಟ ಒಬ್ಬೊಬ್ಬರದು ಒಂದೊಂದು ಕಣ್ಣೀರ ಕಥೆಯಾಗಿದೆ.

17, 19, 23, 25 ವರ್ಷ ಸಾಯೋ ವಯಸ್ಸಂತು ಅಲ್ವೇ ಅಲ್ಲ. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮನೆಗೆ ಆಧಾರವಾಗಬೇಕಿದ್ದರು. ಆದರೆ ಶುಕ್ರವಾರ ರಾತ್ರಿ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೂಸಳೆ ಹೊಸಳ್ಳಿ ಬಳಿ ಸಂಭವಿಸಿದ ದುರಂತ ಹಲವು ಯುವಕರ ಬದುಕನ್ನೇ ಅಂತ್ಯಗೊಳಿಸಿದೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅದೇನೆ ಇರಲಿ ಟ್ರಕ್ ಚಾಲಕನ ನಿರ್ಲಕ್ಷ್ಯ 9 ಜೀವಗಳನ್ನು ಬಲಿಪಡೆದಿದೆ. ಗಣೇಶ ವಿಸರ್ಜನೆ ಸಂಭ್ರಮ ಸೂತಕದ ವಾತಾವರಣ ಸೃಷ್ಟಿಸಿದೆ.

ಟ್ರಕ್ ಹರಿದು ಕಬ್ಬಿನಹಳ್ಳಿ ಗ್ರಾಮದ 25 ವರ್ಷದ ಕುಮಾರ್ ಮತ್ತು 25 ವರ್ಷದ ಪ್ರವೀಣ್ ಅನ್ನೋರು ಕೊನೆಯುಸಿರೆಳೆದಿದ್ದಾರೆ. ಆರ್ಕೆಸ್ಟ್ರಾ ನೋಡಿ, ಗಣೇಶವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಇವರಿಬ್ಬರು ದುರಂತ ಅಂತ್ಯಕಂಡಿದ್ದಾರೆ.

ಈವರೆಗೆ ದುರಂತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ಪೈಕಿ 6 ಜನ ಸ್ಥಳೀಯರು, ಮೂವರು ವಿದ್ಯಾರ್ಥಿಗಳಾಗಿದ್ದಾರೆ. ಹಾಸನದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚಿಕ್ಕಮಗಳೂರು ಜಿಲ್ಲೆ ಮರ್ಲೆಯ ಮಾಣೇಹಳ್ಳಿಯ ಸುರೇಶ್, ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮಿಥುನ್, ಅಂತಿಮ ಬಿಇ ಓದುತ್ತಿದ್ದ ಬಳ್ಳಾರಿಯ ಪ್ರವೀಣ್ ಕುಮಾರ್ ಮೃತಪಟ್ಟಿದ್ದಾರೆ. ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಪೋಷಕರ ರೋದನ ಕರುಳು ಕಿವುಚುವಂತಿದೆ.

ದುರಂತಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಇದಕ್ಕೆಲ್ಲ ಪೊಲೀಸರ ನಿರ್ಲಕ್ಷ್ಯವೇ ಕಾರಣ ಅಂತೇಳಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ, ಎಂಎಲ್‌ಸಿ ಸೂರಜ್‌ ರೇವಣ್ಣ, ಹಾಸನ ಸಂಸದ ಶ್ರೇಯಸ್‌ ಪಟೇಲ್‌ ದೌಡಾಯಿಸಿದ್ದರು ಈ ವೇಳೆ ಪೊಲೀಸರ ವೈಫಲ್ಯದಿಂದಲೇ ಈ ಘಟನೆ ನಡೆದಿದೆ ಅಂತಾ ರೇವಣ್ಣ ಆರೋಪಿಸಿದರು. ಹಾಸನ ಸಂಸದ ಶ್ರೇಯಸ್‌ ಪಟೇಲ್ ಅಪಘಾತದ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ.

ಗಣೇಶ ವಿಸರ್ಜನೆ ವೇಳೆ ಟ್ರಕ್ ಹರಿದು ಸಂಭವಿಸಿದ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಅಂತಾ ಮರುಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್​​, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಯತ್ನಾಳ್, ಪ್ರತಾಪ್ ಸಿಂಹ ಸೇರಿ ಹಲವು ನಾಯಕರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದು, ರಾಜ್ಯಸರ್ಕಾರ ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು. ಗಾಯಾಳುಗಳ ಚಿಕಿತ್ಸೆಗೆ ನೆರವಾಗಬೇಕು ಅಂತಾ ಆಗ್ರಹಿಸಿದ್ದಾರೆ.