ಮನೆ ಅಪರಾಧ ಹಾಸನ: ಕೆರೆ ನೀರಲ್ಲಿ ಮುಳುಗಿ ಇಬ್ಬರ ಸಾವು

ಹಾಸನ: ಕೆರೆ ನೀರಲ್ಲಿ ಮುಳುಗಿ ಇಬ್ಬರ ಸಾವು

0

ಹಾಸನ, ಫೆಬ್ರವರಿ 03: ಕೆರೆಯಲ್ಲಿ ಈಜಲು ತೆರಳಿ ಇಬ್ಬರು ಯುವಕರು ಮೃತಲಟ್ಟಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಯಶ್ವಂತ್ ಸಿಂಗ್ ಆಲಿಯಾಸ್ ಗಣೇಶ್(29), ರೋಹಿತ್ (28) ಮೃತ ದುರ್ದೈವಿಗಳು.

ಕೆಲಸ ಮಾಡಿದ್ದ ಸ್ನೇಹಿತರಾದ ಯಶ್ವಂತ್ ಸಿಂಗ್ ಆಲಿಯಾಸ್ ಗಣೇಶ್ ಮತ್ತು ರೋಹಿತ್ ರಾಜಸ್ತಾನ ಮೂಲದವರಾಗಿದ್ದು, ಇಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ಭಾನುವಾರ (ಫೆ.02) ರಜೆ ಹಿನ್ನೆಲೆಯಲ್ಲಿ ಮದ್ಯಾಹ್ನದವರೆಗೂ ಕೆಲಸ ಮುಗಿಸಿ ಬಿಸಿಲು ಇದ್ದುದರಿಂದ ಈಜಲು ಜಿನ್ನಾಪುರ ಕೆರೆಗೆ ಹೋಗಿದ್ದಾರೆ. ಇಬ್ಬರಿಗೂ ಈಜು ಚನ್ನಾಗಿಯೇ ಗೊತ್ತಿತ್ತು.

ಮೊದಲು ಕೆರೆಗೆ ಇಳಿದ ರೋಹಿತ್ ಈಜುವ ವೇಳೆ ಕೆರೆಯ ಗಿಡಗಂಟಿಗಳ ನಡುವೆ ಸಿಲುಕಿದ್ದಾರೆ. ಮೇಲೆ‌ ಬರಲಾಗದೆ ಕಾಪಾಡಿ‌ ಕಾಪಾಡಿ‌ ಎಂದು ಕೂಗಾಡಿದ್ದಾರೆ. ತಕ್ಷಣ ಕೆರೆಗೆ ಜಿಗಿದ ಗಣೇಶ್ ಕೂಡ ಅಲ್ಲಿನ‌ ಕೆಸರು ಹಾಗೂ ಬಳ್ಳಿಗಳ ನಡುವೆ ಸಿಲುಕಿದ್ದಾರೆ. ಮೇಲೆ ಬರಲು ಏನೆಲ್ಲ ಪ್ರಯತ್ನ ಪಟ್ಟರೂ ಸಾದ್ಯವಾಗದೆ ಇಬ್ಬರು ಗೆಳೆಯರು ಒಟ್ಟಿಗೆ ಜಲ ಸಮಾಧಿಯಾಗಿದ್ದಾರೆ.

ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಮನೆಯವರು ಹುಡುಕುತ್ತಾ ಕೆರೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಸಮೀಪದ ಶ್ರವಣಬೆಳಗೊಳ‌ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೃತದೇಹ ಹೊರತೆಗೆದು ಮರಣೊತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.