ಹಾಸನ : ಈ ಬಾರಿಯ ಹಾಸನಾಂಬೆ ಜಾತ್ರೆ ಅ.9 ರಿಂದ 23ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದ ಹಿನ್ನೆಲೆ ಇಂದು (ಮಂಗಳವಾರ) ಹಾಸನ ಜಿ.ಪಂ ಹೊಯ್ಸಳ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಿತು. ಈ ವೇಳೆ ದರ್ಶನದ ಪಾಸ್ ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆ ತರುವ ಸಾಧ್ಯತೆಯಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರ ನೇತೃತ್ವದಲ್ಲಿ ಶ್ರೀ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆದಿದ್ದು, ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಎಚ್.ಪಿ.ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಡಿಸಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜೇತಾ, ಮೇಯರ್ ಹೇಮಲತಾ ಹಾಗೂ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.
2025ರ ಹಾಸನಾಂಬೆ ಜಾತ್ರಾ ಮಹೋತ್ಸವ ಅ.9 ರಿಂದ ಅ.23ರವರೆಗೆ ನಡೆಯಲಿದ್ದು, ಅ.9ರಂದು ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲಿದೆ. ಬಳಿಕ ಅ.23ರಂದು ಗರ್ಭಗುಡಿ ಬಾಗಿಲು ಮುಚ್ಚಲಿದೆ. ಅ.10ರಿಂದ ಅ.22ರವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್ಗಳು ಸಂಪೂರ್ಣ ರದ್ದುಗೊಳಿಸಿ, ಹೊಸದಾಗಿ ಗೋಲ್ಡ್ ಪಾಸ್ ವಿತರಣೆ ಮಾಡಲಾಗುವುದು.
ಈ ಗೋಲ್ಡ್ ಪಾಸ್ ಪಡೆದರೆ ಮುಂಜಾನೆ 5 ರಿಂದ 11 ಗಂಟೆಯವರೆಗೆ ದರ್ಶನ ಪಡೆಯಬಹುದಾಗಿದೆ. ಒಂದು ಗೋಲ್ಡ್ ಪಾಸ್ಗೆ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ.
ಕೊನೆಯ ಐದು ದಿನ ಎಲ್ಲಾ ಶಿಷ್ಟಾಚಾರ ರದ್ದುಗೊಳಿಸಲಾಗುವುದು, ಸಿಎಂ, ಡಿಸಿಎಂ, ಸಿಜೆ ಮಾತ್ರ ಶಿಷ್ಟಾಚಾರದ ವಾಹನ ಬಳಸಬಹುದು. ಉಳಿದವರು ಪ್ರವಾಸಿ ಮಂದಿರದಲ್ಲಿ ವಾಹನ ನಿಲ್ಲಿಸಿ, ಜಿಲ್ಲಾಡಳಿತ ಆಯೋಜಿಸಿರುವ ವಾಹನದಲ್ಲಿ ಬಂದು ದೇವಿ ದರ್ಶನ ಪಡೆಯಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ರಾಜ್ಯದ ಎಲ್ಲೆಲ್ಲಿಂದಲೊ ಜನರು ಹಾಸನಾಂಬೆ ದರ್ಶನಕ್ಕೆ ಬರುತ್ತಾರೆ. ಆದರೆ ವಿವಿಐಪಿ, ವಿಐಪಿ ಭಕ್ತರ ಕಾರಣದಿಂದ ಜನರಿಗೆ ದರ್ಶನಕ್ಕೆ ಸಮಸ್ಯೆ ಆಗುತ್ತದೆ. ಹಾಗಾಗಿ ಅವರನ್ನು ಗಂಟೆಗಟ್ಟಲೆ ನಿಲ್ಲಿಸಿ ಜನರಿಗೆ ತೊಂದರೆ ಕೊಡೋದು ಸರಿಯಲ್ಲ. ಹಾಗಾಗಿ ಈ ಗಣ್ಯ ಸಂಸ್ಕೃತಿ ತಡೆಯಲು ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಇದರಿಂದ ಜನರಿಗೆ ಅನುಕೂಲ ಆಗುತ್ತದೆ ಎನ್ನುವುದಾದರೆ, ಈ ಎಲ್ಲಾ ರೀತಿಯ ಬದಲಾವಣೆ ಮಾಡೋಣ ಎಂದರು.














