ಮನೆ ಕಾನೂನು ದ್ವೇಷ ಭಾಷಣ: ಧರ್ಮ ನೋಡದೆ ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳಲು ದೆಹಲಿ, ಉತ್ತರಾಖಂಡ, ಯುಪಿ ಪೊಲೀಸರಿಗೆ ಸುಪ್ರಿಂ ಆದೇಶ

ದ್ವೇಷ ಭಾಷಣ: ಧರ್ಮ ನೋಡದೆ ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳಲು ದೆಹಲಿ, ಉತ್ತರಾಖಂಡ, ಯುಪಿ ಪೊಲೀಸರಿಗೆ ಸುಪ್ರಿಂ ಆದೇಶ

0

ಅಪರಾಧ ಎಸಗುವವರ ಧರ್ಮವನ್ನು ಪರಿಗಣಿಸದೇ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳುವಂತೆ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರಿಗೆ ಆದೇಶಿಸುವ ಮೂಲಕ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಮಾಡಿದೆ.

ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸುತ್ತಿರುವ ಹಾಗೂ ಅವರಲ್ಲಿ ಭಯಭೀತ ವಾತಾವರಣ ಉಂಟುಮಾಡುತ್ತಿರುವುದಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಶಾಹೀನ್ ಅಬ್ದುಲ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಆರೋಪಿಗಳ ಧರ್ಮವನ್ನು ಪರಿಗಣಿಸದೇ ಕ್ರಮ ಕೈಗೊಳ್ಳುವುದಕ್ಕೆ ಅಧೀನ ಅಧಿಕಾರಿಗಳಿಗೆ ಪ್ರತಿವಾದಿಗಳು ನಿರ್ದೇಶನ ನೀಡಬೇಕು. ಈ ಮೂಲಕ ದೇಶದ ಜಾತ್ಯತೀಯ ಗುಣವನ್ನು ರಕ್ಷಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಭವಿಷ್ಯದಲ್ಲಿ ದ್ವೇಷ ಭಾಷಣದ ಮೂಲಕ ಹೇಳಿಕೆ ನೀಡುವವರ ವಿರುದ್ಧ ಪೊಲೀಸರು ದೂರು ದಾಖಲಾಗುವುದನ್ನು ಕಾಯದೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಅರ್ಜಿದಾರರು ಉಲ್ಲೇಖಿಸಿರುವ ದ್ವೇಷ ಭಾಷಣಗಳ ಕುರಿತು ಕ್ರಮಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ ಪೊಲೀಸ್ ಪಡೆಗಳು ಕೈಗೊಂಡಿರುವ ಕ್ರಮದ ಕುರಿತು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.

ವಿಚಾರಣೆಯ ಸಂದರ್ಭದಲ್ಲಿ ಪೀಠವು “ನಾವು ಎಲ್ಲಿಗೆ ತಲುಪಿದ್ದೇವೆ? ಧರ್ಮವನ್ನು ಯಾವ ಮಟ್ಟಕ್ಕೆ ನಾವು ಇಳಿಸಿದ್ದೇವೆ? ಇದು ನಿಜಕ್ಕೂ ದುರಂತ. ಇಷ್ಟೆಲ್ಲದರ ನಂತರವೂ ನಾವು ವೈಜ್ಞಾನಿಕ ಮನೋಭಾವದ ಬಗ್ಗೆ ಮಾತನಾಡುತ್ತೇವೆ…” ಎಂದು ನ್ಯಾ. ಜೋಸೆಫ್ ಹೇಳಿದರು.

ನ್ಯಾ. ರಾಯ್ ಅವರು “ಧರ್ಮ ತಟಸ್ಥ ದೇಶವೊಂದರಲ್ಲಿ ಇಂತಹ ಹೇಳಿಕೆಗಳು ಹೇಳಿಕೆಗಳು ತೀವ್ರ ಆಘಾತಕಾರಿ” ಎಂದರು.

ಮುಸ್ಲಿಮರು ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ಆಡಳಿತಾರೂಢ ಪಕ್ಷದ ಸದಸ್ಯರು ದ್ವೇಷಾಪರಾಧ, ದೈಹಿಕ ಹಲ್ಲೆಯಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ, ಅಲ್ಲದೆ ಕೋಮು ದ್ವೇಷದ ಪ್ರಚೋದನೆಯ ಭಾಷಣ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

2021ರ ಡಿಸೆಂಬರ್ 17 ಮತ್ತು 19ರ ನಡುವೆ ದೆಹಲಿಯಲ್ಲಿ ಹಿಂದೂ ಯುವ ವಾಹಿನಿ ಮತ್ತು ಯತಿ ನರಸಿಂಗಾನಂದ ಸೇರಿದಂತೆ ಒಂಭತ್ತು ಮಂದಿ ಪ್ರತ್ಯೇಕವಾಗಿ ಆಯೋಜಿಸಿದ್ದ ಎರಡು ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಹತ್ಯಾಕಾಂಡ ನಡೆಸುವಂತೆ ಬಹಿರಂಗ ಕರೆ ನೀಡಿದ್ದರು ಎಂದು ಅರ್ಜಿದಾರರು ಹೇಳಿದ್ದಾರೆ. 2022ರ ಜನವರಿ 29ರಂದು ಅಲಾಹಾಬಾದ್ ಮತ್ತು ಮೇ 5ರಂದು ದೆಹಲಿ ಮತ್ತು ಸೆಪ್ಟೆಂಬರ್ 4ರಂದು ಹರಿಯಾಣ ಇಂಥದ್ದೇ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.