ಮನೆ ಸ್ಥಳೀಯ ಗ್ರಾಮ-1ಗೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಲ್ಲವೇ?: ಡಾ.ಪುಷ್ಪಾ ಅಮರ್‌ನಾಥ್

ಗ್ರಾಮ-1ಗೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಲ್ಲವೇ?: ಡಾ.ಪುಷ್ಪಾ ಅಮರ್‌ನಾಥ್

0

ಮೈಸೂರು: ಪಂಚ ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮತ್ತು ಮೇಲ್ವಿಚರಣೆ ಮಾಡಲು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಾರಿಗೆ ತರಲಾಗಿದೆ. ಈ ಸಮಿತಿಯನ್ನು ರದ್ದು ಮಾಡುವುದಿಲ್ಲ ಎಂದು ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು.

ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳು ವಿಪಕ್ಷ ನಾಯಕರ ನಿದ್ದೆಗೆಡಿಸಿದೆ. ಹೊಟ್ಟೆ ಕಿಚ್ಚಿನಿಂದ ಅವರು ವಿರೋಧ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಗ್ಯಾರಂಟಿ ಸಮಿತಿ ರದ್ದುಪಡಿಸುವಂತೆ ಸದನದಲ್ಲಿ ಗದ್ದಲ ನಡೆಸುತ್ತಿರುವ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಮೊದಲಿಂದಲೂ ನಿರಂತರವಾಗಿ ಟೀಕೆ ಮಾಡುತ್ತಲೇ ಇದ್ದಾರೆ. ಆದರೆ, ನಮ್ಮ ಸರ್ಕಾರದಲ್ಲಿ ಗ್ಯಾರಂಟಿಗಳು ನಿಲ್ಲುವುದಿಲ್ಲ. ಸಮಿತಿಯಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದರು. ೫೧ ಸಾವಿರ ಕೋಟಿ ಮೊತ್ತದ ಬೃಹತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು, ಉಸ್ತುವಾರಿ ಮಾಡಲು, ಅರ್ಹರು, ಅನರ್ಹರು ಪರಿಶೀಲಿಸಲು, ಒಬ್ಬ ಫಲಾನುಭವಿ ಯೋಜನೆಯಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಸಮಿತಿ ಇದೆ. ಇದಕ್ಕೆ ಯಾಕೇ ವಿರೋಧಿಸಬೇಕು ಎಂದು ಪ್ರಶ್ನಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರಿಗೆ ಐಶರಾಮಿ ಸೌಲಭ್ಯಗಳನ್ನು ಕೊಟ್ಟಿಲ್ಲ. ನಿಗದಿಪಡಿಸಿರುವ ಗೌರವ ಧನ ನಿರ್ವಹಣೆಗೂ ಸಾಕಾಗುವುದಿಲ್ಲ. ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂಬ ವಿಪಕ್ಷ ನಾಯಕರ ಮಾತಿನಲ್ಲಿ ಸತ್ಯವಿಲ್ಲ ಎಂದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಜನರ ಕಷ್ಟ ಕೇಳುವವರು ಇಲ್ಲವಾಗಿದ್ದಾರೆ. ಗ್ಯಾರಂಟಿ ಸಮಿತಿ ಸದಸ್ಯರು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಯಾವುದೇ ಆಸೆ-ಆಮಿಷ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಇದನ್ನೇ ಮೆಚ್ಚದೇ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಯಾವುದೇ ಧರ್ಮ, ಜಾತಿ ಮತ್ತು ಪಕ್ಷಕ್ಕೆ ಸೀಮಿತವಾಗಿಲ್ಲ. ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಬಡತನ ನಿರ್ಮೂಲನೆಯಾಗುತ್ತಿದೆ. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಭಯಭೀತರಾಗಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಕಳೆದ ೧೦ ವರ್ಷಗಳಲ್ಲಿ ಬಡವರ ಪರವಾದ ಒಂದು ಕಾರ್ಯಕ್ರಮ ರೂಪಿಸಲಿಲ್ಲ. ದೇಶದ ಜನತೆಯಲ್ಲಿ ೬೦ ದಿನಗಳ ಕಾಲಾವಕಾಶ ಕೇಳಿದ ಮೋದಿಯವರು ಏನು ಮಾಡಿದರು? ಗ್ರಾಮ ೧ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡಿಲ್ಲವೇ? ಮಹಾರಾಷ್ಟ್ರದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಕೊಂಡಿಲ್ಲವೇ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ ೧೬ನೇ ಬಜೆಟ್ ಸಮತೋಲನ ಕರ್ನಾಟಕದ ಅಭಿವೃದ್ಧಿಯ ದೂರದೃಷ್ಟಿಯಿಂದ ಕೂಡಿದೆ. ಎಲ್ಲ ವರ್ಗ ಜಾತಿ ಧರ್ಮ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೊಟ್ಟೆಕಿಚ್ಚಿನಿಂದ ಹಲಾಲ್ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಬಜೆಟ್ ಎನ್ನುವ ಟೀಕಿಸುವವರು ಚರ್ಚೆಗೆ ಬರುವಂತೆ ಸವಾಲು ಹಾಕಿದರು. ೪ ಲಕ್ಷ ಕೋಟಿ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ೪ ಸಾವಿರ ಕೋಟಿ ಕೊಡಲಾಗಿದೆ. ಇವರ ಆರೋಪದಲ್ಲಿ ಹುರುಳಿಲ್ಲ. ಬರೀ ರಾಜಕೀಯ ಮಾಡಲು ವಿರೋಧ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಪ್ರೊ.ಶಿವಕುಮಾರ್, ಚಂದ್ರಶೇಖರ್, ಬಸವಣ್ಣ, ಲತಾ ಮುಂತಾದವರಿದ್ದರು.