ಮನೆ ರಾಜ್ಯ ಹಾವೇರಿ: ಕಾಲುವೆಯಲ್ಲಿ‌ 10 ಬ್ಯಾಲೇಟ್ ಬಾಕ್ಸ್‌ ಗಳು ಪತ್ತೆ

ಹಾವೇರಿ: ಕಾಲುವೆಯಲ್ಲಿ‌ 10 ಬ್ಯಾಲೇಟ್ ಬಾಕ್ಸ್‌ ಗಳು ಪತ್ತೆ

0

ಹಾವೇರಿ: ಇಲ್ಲಿಯ ಯತ್ನಳ್ಳಿ ರಸ್ತೆ ಬದಿಯ ಕಾಲುವೆಯಲ್ಲಿ‌ 10 ಬ್ಯಾಲೇಟ್ ಬಾಕ್ಸ್‌ ಗಳು ಪತ್ತೆಯಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಹಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Join Our Whatsapp Group

ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ‌ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರವಷ್ಟೇ ನಡೆದಿದೆ. ಇದರ ಮರುದಿನವೇ ಕಾಲುವೆಯಲ್ಲಿ ಬ್ಯಾಲೇಟ್ ಬಾಕ್ಸ್‌ಗಳು ಸಿಕ್ಕಿವೆ. ಇದರಿಂದಾಗಿ ಜನರಲ್ಲಿ ಹಲವು ಅನುಮಾನಗಳು‌ ಮೂಡಿವೆ. ಆದರೆ, ಈ ಬ್ಯಾಲೇಟ್ ಬಾಕ್ಸ್‌ಗಳು ಹಳೆಯದ್ದಾಗಿವೆ. ಶಿಗ್ಗಾವಿ ಚುನಾವಣೆಗೂ ಈ ಬಾಕ್ಸ್‌ಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.

ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿದ್ದೆ. ಇದೇ ಸಂದರ್ಭದಲ್ಲಿ ಕಾಲುವೆಯಲ್ಲಿ ಕಬ್ಬಿಣದ ಬಾಕ್ಸ್‌ಗಳು‌ ಕಂಡವು. ಏನೆಂದು ನೋಡಲು ಹೋದಾಗ, ಬ್ಯಾಲೇಟ್ ಬಾಕ್ಸ್‌ಗಳು ಎಂಬುದು ಗೊತ್ತಾಯಿತು ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಹಳೆಯ ಚುನಾವಣೆ ಸಂದರ್ಭದಲ್ಲಿ ಬಳಕೆ ಮಾಡಿದ ಬ್ಯಾಲೇಟ್ ಬಾಕ್ಸ್‌ಗಳಿರಬಹುದು. ಈ ಬಾಕ್ಸ್‌ಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಇನ್ನೂ ಊರಿಗೆ ಬಂದಿಲ್ಲ. ಬಾಕ್ಸ್‌ಗಳು ನಮ್ಮ ಬಳಿಯೇ ಇವೆ ಎಂದು ಮಾಹಿತಿ ನೀಡಿದರು.

ಬ್ಯಾಲೇಟ್ ಬಾಕ್ಸ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಕಾಲುವೆಯಲ್ಲಿ ಕಬ್ಬಿಣದ ಬಾಕ್ಸ್‌ಗಳು ಬಿದ್ದಿರುವ ಮಾಹಿತಿ ಸಿಕ್ಕಿದೆ. ಪರಿಶೀಲನೆ ನಡೆಸುವಂತೆ ತಹಶೀಲ್ದಾರ್‌ ಅವರಿಗೆ ಹೇಳಿದ್ದೇನೆ. ಈ ಬಾಕ್ಸ್‌ಗಳು, ಹಳೆಯದ್ದು. ಶಿಗ್ಗಾವಿ ಚುನಾವಣೆಗೆ ಅದಕ್ಕೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಯಾವುದೇ ಅನುಮಾನಪಡುವ ಅಗತ್ಯವೂ ಇಲ್ಲ ಎಂದು ಹೇಳಿದರು.