ಮನೆ ಅಪರಾಧ ಹಾವೇರಿ : ವೈದ್ಯರ ನಿರ್ಲಕ್ಷ್ಯ ಆರೋಪ : 17 ವರ್ಷದ ಬಾಲಕಿ ಸಾವು

ಹಾವೇರಿ : ವೈದ್ಯರ ನಿರ್ಲಕ್ಷ್ಯ ಆರೋಪ : 17 ವರ್ಷದ ಬಾಲಕಿ ಸಾವು

0

ಹಾವೇರಿ: ಕೈ ಮೇಲೆ ಗುಳ್ಳೆ ಎದ್ದಿದೆ ಎಂದು ಆಸ್ಪತ್ರೆಗೆ ಬಂದ ಬಾಲಕಿಗೆ ವೈದ್ಯರು ನೀಡಿದ ಇಂಜೆಕ್ಷನ್‌ನಿಂದ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಬಾಲಕಿ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಹೆಡ್ಡಿಗೊಂಡ ಗ್ರಾಮದ ವಂದನಾ ಶಿವಪ್ಪ ತುಪ್ಪದ(17) ಮೃತ ಬಾಲಕಿ. ವಂದನಾಳ ಕೈ ಮಣಿಕಟ್ಟಿನ ಭಾಗದಲ್ಲಿ ಗುಳ್ಳೆ ಎದ್ದ ಕಾರಣದಿಂದಾಗಿ, ಆಕೆಯನ್ನು ಕುಟುಂಬಸ್ಥರು ಹಾವೇರಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ಬೇಕು ಎಂದು ತಿಳಿಸಿ, ಸಲೈನ್ ಜೊತೆಗೆ ಇಂಜೆಕ್ಷನ್ ನೀಡಿದ್ದರು. ಆದರೆ ಇಂಜೆಕ್ಷನ್ ನೀಡಿದ ಕೆಲವೇ ಕ್ಷಣಗಳಲ್ಲಿ ಬಾಲಕಿಗೆ ತೀವ್ರ ರಿಯಾಕ್ಷನ್ ಆಗಿ, ಮೈ ಕೆರೆತ, ಬಾಯಲ್ಲಿ ನೊರೆ ಹರಿದು, ಕ್ಷಣಾರ್ಧದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಬಾಲಕಿಯ ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರು ಈ ದುರ್ಘಟನೆಯ ಹಿಂದಿರುವ ಮೂಲ ಕಾರಣ ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿದ್ದಾರೆ. ವೈದ್ಯರು ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಇಂಜೆಕ್ಷನ್ ನೀಡಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿ, ಆಸ್ಪತ್ರೆಯ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಆಕ್ರೋಶದಿಂದಾಗಿ ಆಸ್ಪತ್ರೆಯ ಗಾಜುಗಳು ಕೂಡ ಭಗ್ನಗೊಂಡಿವೆ.

ಸುದ್ದಿ ತಿಳಿದ ತಕ್ಷಣ, ತಾಲೂಕು ವೈದ್ಯಾಧಿಕಾರಿ ಡಾ. ಪ್ರಭಾಕರ್ ಕುಂದೂರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು, “ಬಾಲಕಿಯ ಸಾವಿಗೆ ಕಾರಣ ಏನೆಂಬುದನ್ನು ಸಮಗ್ರ ತನಿಖೆಯಿಂದ ಪತ್ತೆ ಹಚ್ಚಲಾಗುತ್ತದೆ. ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸೀಜ್ ಮಾಡಲಾಗುತ್ತಿದ್ದು, ವರದಿ ಸಿದ್ಧವಾದ ನಂತರ ಉನ್ನತ ಅಧಿಕಾರಿಗಳಿಗೆ ಶಿಫಾರಸು ಸಲ್ಲಿಸಲಾಗುತ್ತದೆ” ಎಂದು ಹೇಳಿದರು. ಈ ಘಟನೆಯ ಹಿನ್ನೆಲೆಯಲ್ಲಿ, ಆಸ್ಪತ್ರೆಯ ವೈದ್ಯರು ನಾಪತ್ತೆಯಾಗಿದ್ದು, ಇದು ಕುಟುಂಬಸ್ಥರ ಕೋಪಕ್ಕೆ ಇನ್ನಷ್ಟು ಕಾರಣವಾಗಿದೆ. ಪರಿಸ್ಥಿತಿ ಉದ್ರಿಕ್ತವಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ನಿರೀಕ್ಷಕ ಎಲ್.ಎಸ್. ಶಿರಕೋಳ ಮತ್ತು ನಗರ ಸಿಪಿಐ ಮೋಲಿಲಾಲ್ ಪವಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.