ಹಾವೇರಿ: ರಾಜ್ಯವನ್ನು ಬೆಚ್ಚಿ ಬೀಳಿಸಿದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪ್ರಮುಖ 7 ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ತಕ್ಷಣವೇ ಜೈಲಿನಿಂದ ಬಿಡುಗಡೆಯಾಗಿ ಭರ್ಜರಿಯಾಗಿ ರೋಡ್ ಶೋ ನಡೆಸಿದ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಪಟ್ಟಣದಲ್ಲಿ ಈ ರೋಡ್ ಶೋ ನಡೆದಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.
ಮೂರು ದಿನಗಳ ಹಿಂದೆ ಹಾವೇರಿ ಸಬ್ ಜೈಲಿನಿಂದ ಬಿಡುಗಡೆಯಾದ ಆರೋಪಿಗಳು, 5 ಕಾರುಗಳಲ್ಲಿ 20ಕ್ಕೂ ಹೆಚ್ಚು ಹಿಂಬಾಲಕರೊಂದಿಗೆ ಅಕ್ಕಿ ಆಲೂರಿನವರೆಗೆ ರೋಡ್ ಶೋ ನಡೆಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬೀದಿಗಳಲ್ಲಿ ಕಾರುಗಳ ಭರ್ಜರಿ ಸಂಚಲನ, ಹಿಂಬಾಲಕರ ಕೂಗುವ ದೃಶ್ಯಗಳು ಜನಮನವನ್ನು ಕೆರಳಿಸುತ್ತಿವೆ.
ಕಳೆದ 3 ದಿನಗಳ ಹಿಂದೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಸಂತ್ರಸ್ತೆ ಆರೋಪಿಗಳನ್ನು ಗುರುತಿಸಲು ವಿಫಲವಾದ ಹಿನ್ನಲೆ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
2024, ಜನವರಿ 8ರಂದು ಹಾನಗಲ್ ಹೊರವಲಯದಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜೈಲುಪಾಲಾಗಿದ್ದ 19 ಆರೋಪಿಗಳ ಪೈಕಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ಆದರೆ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ಹಲವು ಬಾರಿ ನ್ಯಾಯಾಲಯ ತಿರಸ್ಕರಿಸಿತ್ತು. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನಲೆ ಆರೋಪಿಗಳಿಗೆ ಈಗ ಜಾಮೀನು ಸಿಕ್ಕಿದೆ.















