ಹಾವೇರಿ: ಜಿಲ್ಲೆಯ ಅನ್ನದಾತರ ನಿದ್ದೆಗೆಡಿಸಿದ್ದ ಜಾನುವಾರು ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಶಿಗ್ಗಾಂವ್ ತಾಲೂಕಿನ ಬಂಕಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ದಾದಾಪೀರ್ ಕಡೇಮನಿ (35), ಜುಬೇರ್ (25), ಅಬ್ದುಲ್ ಸತ್ತರ್(38), ಪಾರೂಕ್ (23) ಮತ್ತು ಅಕ್ರಂ ಅಲಿ (25) ಎಂದು ಗುರುತಿಸಲಾಗಿದೆ. ಬಂಧಿತರಿಂದ 7 ಲಕ್ಷ 50 ಸಾವಿರ ರೂ ಮೌಲ್ಯದ ಮೂರು ಎತ್ತುಗಳು ಮತ್ತು ಬೊಲೆರೋ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಫೆ.22 ರಂದು ಆರೋಪಿಗಳು ಶಿಗ್ಗಾಂವ್ ತಾಲೂಕಿನ ಕಲ್ಯಾಣ ಗ್ರಾಮದಲ್ಲಿ ಒಂದು ಎತ್ತನ್ನು ಕಳ್ಳತನ ಮಾಡಿದ್ದರು. ಅಲ್ಲದೇ ಅಗಡಿ ಗ್ರಾಮದಲ್ಲಿ ಎರಡು ಎತ್ತುಗಳನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಪ್ರಕರಣದ ಬೆನ್ನು ಬಿದ್ದ ಪೊಲೀಸರು, ಬುಧವಾರ ಸಂಜೆ ಆರು ಗಂಟೆಗೆ ಬಾಡದ ಅರಮನೆ ಬಳಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಜಾನುವಾರುಗಳ ಕಳ್ಳತನ ಮಾಡಿರುವ ವಿಷಯ ಬಾಯಿ ಬಿಟ್ಟಿದ್ದಾರೆ.
ಮನೆಯಿಂದ ಬಯಲಿನಲ್ಲಿ ಕಟ್ಟುತ್ತಿದ್ದ ರೈತರ ಜಾನುವಾರುಗಳನ್ನೇ ಇವರು ಟಾರ್ಗೆಟ್ ಮಾಡುತ್ತಿದ್ದರು. ರಾತ್ರಿ ಯಾರಿಗೊ ಗೊತ್ತಾಗದಂತೆ ಕ್ಯಾಪ್ ಹಾಕಿಕೊಂಡು ಬಂದು ಜಾನುವಾರು ಕಳ್ಳತನ ಮಾಡುತ್ತಿದ್ದರು. ಈ ಕುರಿತಂತೆ ಹಾವೇರಿ ಜಿಲ್ಲೆಯಲ್ಲಿ ಹಲವು ರೈತರು ಪೊಲೀಸರಿಗೆ ದೂರು ನೀಡಿದ್ದರು.
ಕೆಲವು ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳನ್ನು ಕಳೆದುಕೊಂಡು, ಕಂಗಾಲಾಗಿದ್ದರು. ಇನ್ನು ಈ ಆರೋಪಿಗಳು ಕಟ್ಟುಮಸ್ತಾದ ಜಾನುವಾರುಗಳನ್ನು ಹೆಚ್ಚಿನ ಬೆಲೆಗೆ ಬೇರೆ ರೈತರಿಗೆ ಮಾರಾಟ ಮಾಡುತ್ತಿದ್ದರು. ಸಣಕಲು ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬಂಕಾಪುರ ಪಿಎಸ್ಐ ನಿಂಗರಾಜ ನೇತೃತ್ವದ ತಂಡ ಜಾನುವಾರ ಕಳ್ಳತನ ಪ್ರಕರಣ ಬೆನ್ನತ್ತಿ, ಬುಧವಾರ ಬಂಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿಂಗರಾಜ್ ಮತ್ತು ತಂಡದ ಕಾರ್ಯಾಚರಣೆಗೆ ಹಾವೇರಿ ಎಸ್ಪಿ ಅಂಶುಕುಮಾರ್ ಶ್ಲಾಘನೆ ವ್ಯಕ್ತಪಡಿಸಿ, ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.
ಇದೇ ವೇಳೆ, ಮುಂಜಾಗ್ರತೆಯಿಂದ ಇರುವಂತೆ ರೈತರಿಗೆ ಹಾವೇರಿ ಎಸ್ಪಿ ಮನವಿ ಮಾಡಿದ್ದಾರೆ. ಎಲ್ಲೆಂದರಲ್ಲಿ ಜಾನುವಾರು ಕಟ್ಟದೇ ಕಣ್ಗಾವಲಿನಲ್ಲಿ ಜಾನುವಾರು ಕಟ್ಟಬೇಕು. ಜಾನುವಾರುಗಳ ಫೋಟೋ ಇನ್ಸುರನ್ಸ್ ಇಟ್ಟುಕೊಂಡಿರಬೇಕು. ಜಾನುವಾರುಗಳ ಕಳೆದ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಹಾವೇರಿ ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.














