ಹಾವೇರಿ: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಮಾವ ಕೊಲೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಬಳಿ ನಡೆದಿದೆ.
ಕೊಲೆಯಾದ ಯುವತಿಯನ್ನು ದೀಪಾ ಗೊಂದಿ(21) ಎಂದು ಗುರುತಿಸಲಾಗಿದೆ. ಮಾಲತೇಶ ಬಾರ್ಕಿ(35) ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ.
ಆರೋಪಿ ಮಾಲತೇಶ್ ತನ್ನ ಸೊಸೆ ದೀಪಾಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಿಶ್ಚಿತಾರ್ಥದ ನಂತರ ಮಾವನೊಂದಿಗೆ ಮದುವೆಯಾಗಲು ದೀಪಾ ನಿರಾಕರಿಸಿದ್ದರಿಂದ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಏಪ್ರೀಲ್ 22ರಂದು ಮಾಲತೇಶ್ ಜೊತೆ ದೀಪಾ ಮದುವೆ ಫಿಕ್ಸ್ ಆಗಿತ್ತು. ಈ ಮದುವೆಗೆ ನಿರಾಕರಿಸಿದ್ದಕ್ಕೆ ಆರೋಪಿ ಮಾಲತೇಶ ದೀಪಾಳನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ನಡೆದು ಐದು ದಿನಗಳ ನಂತರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮಾಲತೇಶನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.