ಮನೆ ಕಾನೂನು ನೀಟ್‌-ಪಿಜಿ ಆಕಾಂಕ್ಷಿಗೆ ಜಾತಿ ತಿದ್ದುಪಡಿ ಮಾಡಿ, ಒಬಿಸಿ ಕೋಟಾದಡಿ ಸೀಟು ಪಡೆಯಲು ಅನುಮತಿಸಿದ ಹೈಕೋರ್ಟ್‌

ನೀಟ್‌-ಪಿಜಿ ಆಕಾಂಕ್ಷಿಗೆ ಜಾತಿ ತಿದ್ದುಪಡಿ ಮಾಡಿ, ಒಬಿಸಿ ಕೋಟಾದಡಿ ಸೀಟು ಪಡೆಯಲು ಅನುಮತಿಸಿದ ಹೈಕೋರ್ಟ್‌

0

ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ-ಸ್ನಾತಕೋತ್ತರ (ನೀಟ್ -ಪಿಜಿ) ಕೋರ್ಸ್ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತನ್ನ ಜಾತಿಯ ಒಳಪಡುವ ಪ್ರವರ್ಗವನ್ನು ಸರಿಯಾಗಿ ನಮೂದಿಸುವಲ್ಲಿ  ತಪ್ಪೆಸಗಿದ್ದ ವಿದ್ಯಾರ್ಥಿನಿಗೆ ನೆರವಾಗಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಆಕೆಯ  ಪ್ರವರ್ಗವನ್ನು ಬದಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಆ ವಿದ್ಯಾರ್ಥಿನಿ ಇತರೆ ಹಿಂದುಳಿದ ವರ್ಗದ ಕೋಟಾದಡಿ ಜೇಷ್ಠತಾ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಕೋಲಾರದ ಡಾ. ಲಕ್ಷ್ಮೀ ಪಿ. ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

 “ಅರ್ಜಿ ನಮೂನೆ ಕಲಂ 7ರಲ್ಲಿನ ಸಾಮಾನ್ಯ (ಜನರಲ್‌) ಎಂದು ನಮೂದಿಸಿದ್ದನ್ನು ಒಬಿಸಿ ಎಂದು ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಿದೆ. ಅಲ್ಲದೇ, ನ್ಯಾಯಾಲಯ ಅರ್ಜಿದಾರರ ಹೆಸರನ್ನು ಒಬಿಸಿಯ ಜೇಷ್ಠತಾ ಪಟ್ಟಿಯಲ್ಲಿ ಪರಿಗಣಿಸಿ ಅದರಂತೆ ಅವರ ಹೆಸರು ಸೇರ್ಪಡೆ ಮಾಡಬೇಕು” ಎಂದೂ ಸಹ ಆದೇಶಿಸಿದೆ.

 “ಪ್ರತಿವಾದಿಗಳ ವಾದವನ್ನು ಮನ್ನಿಸುವುದಾದರೆ ಬಹುತೇಕ ಅರ್ಜಿದಾರರು ಅರ್ಜಿಗಳನ್ನು ಭರ್ತಿ ಮಾಡುವಾಗ ದೋಷಗಳಾಗಿರುತ್ತವೆ. ಉಡಾಫೆಯ ಮೇಲೆ ದೋಷಗಳಾಗಿರುತ್ತವೆ ಎಂಬ ತೀರ್ಮಾನಕ್ಕೆ ಬರಲು ನ್ಯಾಯಾಲಯದ ಮುಂದೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಅದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

 “ಅರ್ಜಿದಾರರು ತಮ್ಮ ಹೆಸರನ್ನು ಹಲವು ಪ್ರವರ್ಗಗಳಲ್ಲಿ ನಮೂದಿಸಲು ಮನವಿ ಮಾಡಿಲ್ಲ. ಅವರ ಕೋರಿಕೆಯು ಒಬಿಸಿಯ- 3ಎ ಪ್ರವರ್ಗದಲ್ಲಿ ಸೇರ್ಪಡೆ ಮಾಡಬೇಕು ಎಂಬುದು ಮಾತ್ರವೇ ಆಗಿದೆ. ಹೀಗಾಗಿ, ಆ ಪ್ರವರ್ಗದ ಜೇಷ್ಠತಾ ಪಟ್ಟಿ ಪರಿಷ್ಕರಿಸಿದರೆ ಅರ್ಜಿದಾರರು ಕೂಡ ಸ್ಥಾನ ಪಡೆದು ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ. ಕೌನ್ಸೆಲಿಂಗ್ ಮುಕ್ತಾಯವಾಗಲು ಇನ್ನೂ 60 ದಿನ ಇದೆ. ಹೀಗಾಗಿ, ಅರ್ಜಿದಾರರಿಗೆ ಒಂದು ಅವಕಾಶ ಮಾಡಿಕೊಡುವುದು ನ್ಯಾಯೋಚಿತ” ಎಂದೂ ಸಹ ಪೀಠ ತನ್ನ ಆದೇಶದಲ್ಲಿ ಹೇಳಿದೆ.

ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ಪ್ರತಿನಿಧಿಸಿದ್ದ ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು “ಅರ್ಜಿದಾರರ ನಿರ್ಲಕ್ಷ್ಯ ಮತ್ತು ನಿರಾಸಕ್ತಿಯ ಮನೋಭಾವ ಇಲ್ಲಿ ಎದ್ದು ಕಾಣುತ್ತದೆ. ಅವರು ಯಾವುದೇ ರೀತಿಯ ಅನುಕಂಪಕ್ಕೆ ಅರ್ಹರಲ್ಲ. ಒಬ್ಬರಿಗೆ ದೋಷ ತಿದ್ದಲು ಅವಕಾಶ ನೀಡಿದರೆ, ಎಲ್ಲರೂ ಅದೇ ಮಾದರಿಯನ್ನು ಅನುಸರಿಸುತ್ತಾರೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮೂಲತಃ ಒಕ್ಕಲಿಗ ಜಾತಿಗೆ ಸೇರಿದವರಾಗಿದ್ದು, ಅದು ಕರ್ನಾಟಕ ರಾಜ್ಯದಲ್ಲಿ ಒಬಿಸಿ ಪ್ರವರ್ಗದಡಿ ಬರುತ್ತದೆ. ಆದರೆ ಅವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಆಚಾತುರ್ಯದಿಂದಾಗಿ ತಾವೇ ಒಕ್ಕಲಿಗ ಜಾತಿ ನಮೂದಿಸಿದ್ದರೂ ಪ್ರವರ್ಗ ವಿಭಾಗದಲ್ಲಿ ಸಾಮಾನ್ಯ ಪ್ರವರ್ಗ ಎಂದು ಆಯ್ಕೆ ಮಾಡಿದ್ದರು. ಆನಂತರ ಅವರಿಗೆ ತಮ್ಮ ಪ್ರಮಾದದ ಅರಿವಾಗಿತ್ತು. ಆ ತಪ್ಪನ್ನು ಸರಿಪಡಿಸಿಕೊಳ್ಳಲು ಸಂಬಂಧಿಸಿದ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಮಂಡಳಿ ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಹೀಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.