ಮೈಸೂರು(Mysuru): ಎಚ್.ಡಿ.ಕೋಟೆ ಹಾಗೂ ಚಾಮರಾಜನಗರವನ್ನು ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಲಾಗಿದೆ. ಆ ಹಣೆಪಟ್ಟಿ ಹೋಗಬೇಕು ಎಂದು ಬಿಜೆಪಿ ಮುಖಂಡ ಇ.ಮಾರುತಿರಾವ್ ಪವಾರ್ ಆಶಯ ವ್ಯಕ್ತಪಡಿಸಿದರು.
ಕಾವೇರಿ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿಯು ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಅಕಾಡೆಮಿ ಹಾಗೂ ಪ್ರಾದೇಶಿಕ ಅಸಮತೋಲನ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿಯೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೂ ಹಿಂದುಳಿದ ತಾಲ್ಲೂಕುಗಳು ಎಂಬ ಹಣೆಪಟ್ಟಿ ಇದೆ. ಆದ್ದರಿಂದ ಕಾವೇರಿ ಸೀಮೆಯ ನಾಲ್ಕು ಜಿಲ್ಲೆಗಳು ಮತ್ತಷ್ಟು ಅಭಿವೃದ್ಧಿಯಾಗಬೇಕು ಎಂದರು.
ಹೆಚ್ಚಿನ ಅನುದಾನ ನೀಡಿ:
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಕುರಿತು ವಿಚಾರ ಮಂಡಿಸಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಎಚ್.ಡಿ.ಕೋಟೆ ಹಾಗೂ ಚಾಮರಾಜನಗರ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ವಿಶೇಷವಾಗಿ ಆದಿವಾಸಿಗಳು ವಾಸಿಸುತ್ತಿದ್ದಾರೆ. ಚಾಮರಾಜನಗರದ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಕಬಿನಿ 2ನೇ ಹಂತದ ನೀರಾವರಿ ಯೋಜನೆ ಜಾರಿ ಮಾಡಬೇಕು. ಆದಿವಾಸಿಗಳ ಪುನರ್ವಸತಿಗೆ ಸಂಬಂಧಿಸಿದ ಡಾ.ಮುಜಾಫರ್ ಅಸ್ಸಾದಿ ವರದಿ ಜಾರಿಗೊಳಿಸಬೇಕು. ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಅಕಾಡೆಮಿಯ ಸಂಸ್ಥಾಪಕ ರಮೇಶ್ ಸುರ್ವೆ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣ ಕಾರ್ಯ ನಡೆದಿಲ್ಲ. ಕರ್ನಾಟಕವನ್ನು ಪ್ರಾದೇಶಿಕವಾಗಿ 10 ಕಂದಾಯ ವಿಭಾಗವಾಗಿ ಗುರುತಿಸಿಸಬೇಕು. ಆಗ ಪ್ರಾದೇಶಿಕ ಅಸಮತೋಲನ ನಿವಾರಣೆ ಸಾಧ್ಯವಾಗಲಿದೆ ಎಂದರು.
ಕೊಡಗು ಜಿಲ್ಲೆ ಕುರಿತು ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ, ಮಂಡ್ಯ ಜಿಲ್ಲೆ ಬಗ್ಗೆ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿದರು. ಸಾಧಕರಿಗೆ ಭಾರತ ಜ್ಯೋತಿ, ಕರ್ನಾಟಕ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಳಗಾವಿ ಚಿಪ್ಪಲಕಟ್ಟಿ ಹಿರೇಮಠದ ಕಲ್ಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಹಪುರದ ಗಜಲ್ ಕವಿ ಸಿದ್ದರಾಮ ಹೊನ್ಕಲ್ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಿರ್ಮಾಪಕ ಎಸ್.ವೆಂಕಟೇಶ್ ಪ್ರಶಸ್ತಿ ಪ್ರದಾನ ಮಾಡಿದರು. ಕಲಾವಿದರಾದ ಗಣೇಶರಾವ್ ಕೇರಸ್ ಕರ್, ಮೀನಾ, ಸಾಹಿತಿ ಡಾ.ಎಂ.ಮಹೇಶ ಚಿಕ್ಕಲ್ಲೂರು, ಅಕಾಡೆಮಿಯ ಅಧ್ಯಕ್ಷ ಕಸ್ತೂರಿ ಚಂದ್ರು ಇದ್ದರು.