ಮನೆ ಸ್ಥಳೀಯ ಹೆಚ್.ಡಿ.ಕೋಟೆ : ಜೀವನಾಧಾರ ಎಣ್ಣೆ ತಯಾರಿಕಾ ಘಟಕಕ್ಕೆ ಜಿಪಂ ಸಿಇಓ ಕೆ.ಎಂ.ಗಾಯತ್ರಿ ಭೇಟಿ

ಹೆಚ್.ಡಿ.ಕೋಟೆ : ಜೀವನಾಧಾರ ಎಣ್ಣೆ ತಯಾರಿಕಾ ಘಟಕಕ್ಕೆ ಜಿಪಂ ಸಿಇಓ ಕೆ.ಎಂ.ಗಾಯತ್ರಿ ಭೇಟಿ

0

ಹೆಚ್.ಡಿ.ಕೋಟೆ : ತಾಲ್ಲೂಕಿನ ಹೊಸಹೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚೇಗೌಡನಹಳ್ಳಿ ಹಾಡಿಯಲ್ಲಿ  ಸ್ವ-ಸಹಾಯ ಸಂಘದ ಮಹಿಳೆಯರು ನಿರ್ವಹಿಸುತ್ತಿರುವ ಜೀವನಾಧಾರ ಎಣ್ಣೆ ತಯಾರಿಕಾ ಘಟಕಕ್ಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯತ್ರಿ ಅವರು ಇಂದು ಭೇಟಿ ನೀಡಿ ವೀಕ್ಷಿಸಿದರು.

ಸಂಜೀವಿನಿ ಒಕ್ಕೂಟದ ಕಾಳಮ್ಮ ಸ್ವ-ಸಹಾಯ ಮಹಿಳೆಯರು ನಡೆಸುತ್ತಿರುವ ಗಾಣದ ಎಣ್ಣೆ ಘಟಕ ವೀಕ್ಷಿಸಿ, ಮಹಿಳೆಯರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಎಣ್ಣೆ ಘಟಕಕ್ಕೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವಂತೆ ಬಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಲಹೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹ ಕುಟುಂಬಕ್ಕೆ 100 ಉದ್ಯೋಗ ನೀಡಲಾಗುತ್ತದೆ. ಹಾಗಾಗಿ ಉದ್ಯೋಗ ಚೀಟಿ ಇಲ್ಲ ಹಾಡಿ ಜನರಿಗೆ ಉದ್ಯೋಗ ಚೀಟಿ ವಿತರಿಸಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.

ಹಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ,  ಸಮವಸ್ತ್ರ, ಶೂ,ವಿತರಣೆ, ಮಧ್ಯಾಹ್ನದ ಬಿಸಿಯೂಟ ಗುಣಮಟ್ಟ ಪರಿಶೀಲಿಸಿ ಊಟದ ರುಚಿಯನ್ನು ಸವಿದರು. ಬಳಿಕ ಅಂಗನವಾಡಿಗೆ ಭೇಟಿ ನೀಡಿ ಅಡುಗೆ ಕೋಣೆ, ಸ್ಟೋರ್ ರೂಂ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದರು.

ಗ್ರಾಮ ಆರೋಗ್ಯ ಅಭಿಯಾನದಡಿ ಹಾಡಿ ಜನರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಸ್ಥಳಕ್ಕೆ ಭೇಟಿ ನೀಡಿ, ಎಲ್ಲರು ಆರೋಗ್ಯ ಕಡೆ ಗಮನಹರಿಸಬೇಕು ಎಂಬ ದೃಷ್ಟಿಯಿಂದ ತಮ್ಮ ಮನೆ ಬಾಗಿಲಿಗೆ ಬಂದು ಬಿ.ಪಿ, ಶುಗರ್ ಹಾಗೂ ಇನ್ನಿತರ ಪರೀಕ್ಷೆ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಹೊಸಹೊಳಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತೆರಿಗೆ ವಸೂಲಾತಿ, ಇ- ಹಾಜರಾತಿ, ಆಸ್ತಿ ಸಮೀಕ್ಷೆ, ಮಹತ್ಮಗಾಂಧಿ ನರೇಗಾ ಯೋಜನೆ ಹಾಗೂ ಜಲ ಜೀವನ ಮಿಷನ್ ಕಾಮಗಾರಿಗಳನ್ನು ಪರಿಶೀಲಿಸಿದರು.

ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್ ಎಸ್.ಪಿ, ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ, ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ರಘುನಾಥ್ ಕೆ.ಎಂ,

ಪಿಡಿಒ ರಮೇಶ್, ಕಾರ್ಯದರ್ಶಿ ವೆಂಕಟೇಶ್ ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.