ಮೈಸೂರು: ಮಾಹಿತಿ ಹಕ್ಕು ಅಧಿನಿಯಮದಡಿ ಸರಗೂರು ತಾಲ್ಲೂಕು ಕಂದಲಿಕೆ ಹೋಬಳಿ ಬಿದರಹಳ್ಳಿ ಸರ್ವೆ ನ0,61, ಮತ್ತು 71/1, ಹಾಗೂ 71/2 ರ ಮಾಹಿತಿಯನ್ನು ಕೇಳಿದ್ದು, ಪೊಲೀಸ್ ಅಧಿಕಾರಿಗಳು ಬೇರೆ ಸರ್ವೆ ನಂಬರ್ ನ ಖಾತೆ ಕಡತ ಕಾಣೆಯಾಗಿರುವ ಕುರಿತು ದಾಖಲಾದ ಎಫ್ ಐ ಆರ್ ಪ್ರತಿಯನ್ನು ಹಿಂಬರಹದಲ್ಲಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿದರಹಳ್ಳಿ ಸರ್ವೆ ನ0,61, ಮತ್ತು 71/1, ಹಾಗೂ 71/2 ರ ಮಾಹಿತಿಯನ್ನು ಕೇಳಿದರೆ, ಹೆಚ್.ಡಿ.ಕೋಟೆ ಠಾಣೆಯ ಪೊಲೀಸರು, ಅಂತರ ಸಂತೆ ಹೋಬಳಿ ಎನ್ ಬೆಳತೂರು ಗ್ರಾಮದ ಸರ್ವೆ NO,56/136, ಮತ್ತು 56/134 ರ ಕುರಿತು ಎಫ್ ಐ ಆರ್ ಆಗಿರುವ ದಾಖಲೆ ನೀಡಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಲಿಂಗನಾಯ್ಕ ಆರೋಪಿಸಿದ್ದಾರೆ.
ಹಿಂಬರಹದಲ್ಲೇನಿದೆ ?
ಬಿದರಹಳ್ಳಿ ಗ್ರಾಮದ ಸರ್ವೆ ನಂ 71/1/, 61 ಮತ್ತು 71/2 ರ ಜಮೀನಿಗೆ ಸಂಬಂಧಿಸಿದಂತೆ 1997-98 ನೇ ಸಾಲಿನಲ್ಲಿ ಖಾತೆ ಮಾಡಿರುವ ಖಾತೆ ಕಡತದ ನಕಲು ಕೋರಿ ಲಿಂಗನಾಯ್ಕ ಎಂಬುವವರು ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ಪೊಲೀಸರು ಹಿಂಬರಹ ನೀಡಿದ್ದು, ಬಿದರಹಳ್ಳಿ ಗ್ರಾಮದ ಸರ್ವೆ ನಂ 71/1/, 61 ಮತ್ತು 71/2 ರ ಜಮೀನಿಗೆ ಸಂಬಂಧಿಸಿದಂತೆ 1997-98 ನೇ ಸಾಲಿನಲ್ಲಿ ಖಾತೆ ಕಡತವು ಖಾಯಂ ಕಡತವಾಗಿದ್ದು, ಕಡತವು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಕಚೇರಿಗೆ ನಿರ್ದೇಶನವಿದೆ ಎಂದು ಇಲಾಖೆ ತಿಳಿಸಿದೆ.
ಅಂತೆಯೇ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿಯೂ ಕಡತ ಕಾಣೆಯಾಗಿರುವ ಕುರಿತು ದೂರು ದಾಖಲಾಗಿರುವ ಕುರಿತು ಹಿಂಬರಹ ನೀಡಿದ್ದು, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ನಂ.383/2022 ಕಲಂ: 201, 408, 468 ಐಪಿಸಿ 192 (ಎ) ಕರ್ನಾಟಕ ಲ್ಯಾಂಡ್ ರೆವಿನ್ಯೂ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಸದರಿ ಪ್ರಕರಣವು ತನಿಖೆಯಲ್ಲಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ-2005 ಕಲಂ 8(1) (ಹೆಚ್) ರೀತ್ಯಾ ಮಾಹಿತಿ ನೀಡಲು ವಿನಾಯಿತಿ ಇರುವುದರಿಂದ ಆರ್ ಟಿ ಐ ಅರ್ಜಿಯನ್ನು ಮುಕ್ತಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಅಂತೆಯೇ ಹಿಂಬರಹದೊಂದಿಗೆ ಎಫ್ ಐಆರ್ ಪ್ರತಿ ದಾಖಲಿಸಿದ್ದಾರೆ.
ಆದರೆ ಬಿದರಹಳ್ಳಿ ಸರ್ವೆ ನ0,61, ಮತ್ತು 71/1, ಹಾಗೂ 71/2 ರ ಕಡತ ಕಾಣೆಯಾಗಿರುವ ಎಫ್ ಐ ಆರ್ ಪ್ರತಿಯ ಬದಲಿಗೆ ಅಂತರ ಸಂತೆ ಹೋಬಳಿ ಎನ್ ಬೆಳತೂರು ಗ್ರಾಮದ ಸ.ನಂ 56/136, 56/134 ರಲ್ಲಿ 3-00 ಎಲ್ ಎನ್ ಡಿ (ಅ) 5/96-97 ರ ಕಡತ ಕಾಣೆಯಾಗಿರುವ ಎಫ್ ಐ ಆರ್ ನೀಡಿದ್ದಾರೆ.
ಇದು ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ಇಲ್ಲವೇ ಅಧಿಕಾರಿಗಳನ್ನು ಬೇಕೆಂದೇ ಮಾಹಿತಿ ನೀಡುವುದರಿಂದ ತಪ್ಪಿಸಿಕೊಳ್ಳಲು ಜಾಣ ಕುರುಡು ಪ್ರದರ್ಶಿಸಿದ್ದಾರೆಯೇ ಎಂಬುದು ಇನ್ನು ಮುಂದಷ್ಟೇ ತಿಳಿದು ಬರಬೇಕಿದೆ.