ಮನೆ ರಾಜಕೀಯ ಸಿಡಿ ಶಿವು, ಡಿವಿಡಿ ಶಿವು ಎಂದು ಕುಟುಕಿದ ಹೆಚ್.ಡಿ.ಕುಮಾರಸ್ವಾಮಿ

ಸಿಡಿ ಶಿವು, ಡಿವಿಡಿ ಶಿವು ಎಂದು ಕುಟುಕಿದ ಹೆಚ್.ಡಿ.ಕುಮಾರಸ್ವಾಮಿ

0

ಮಂಡ್ಯ: ಮಂಡ್ಯದಲ್ಲಿ ತಮ್ಮ ಬಗ್ಗೆ ವಿಡಿಯೋಗಳನ್ನು ಪ್ರದರ್ಶಿಸಿದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅವರು ತಮ್ಮ ಹಳೆಯ ಚಾಳಿ ಬಿಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕುಟುಕಿದರು.

Join Our Whatsapp Group


ಮೈಸೂರು ಚಲೋ ಐದನೇ ದಿನದ ಪಾದಯಾತ್ರೆ ವೇಳೆ ಮಂಡ್ಯದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ನನಗೆ ಬಹಳಷ್ಟು ಜನರು ಕೊಚ್ಚೆಗಳ ಬಗ್ಗೆ ಮಾತಾಡಬಾರದು ಎಂದು ಸಲಹೆ ಕೊಟ್ಟಿದ್ದಾರೆ.ನಾನು ಮಾತನಾಡಬಾರದು ಎಂದುಕೊಂಡಿದ್ದೆ.ಮಂಡ್ಯದಲ್ಲಿ ಅವರು ಒಂದು ವಿಡಿಯೋ ಪ್ಲೇ ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಆ ವ್ಯಕ್ತಿಯನ್ನು ಸಿಡಿ ಶಿವು ಎಂದು ಕರೆದಿದ್ದೆ. ಅವರ ಡಿವಿಡಿ ತೋರಿಸುವ ಚಾಳಿ ಎಲ್ಲಿ ಹೋಗುತ್ತದೆ ಹೇಳಿ ಹೇಳಿ. ಅವರು ಇನ್ನೂ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ನಾನು ಹಿಂದೆ ನೀಡಿದ್ದ ಹೇಳಿಕೆಗಳನ್ನು ಡಿವಿಡಿ ಶಿವು ಪ್ಲೇ ಮಾಡಿ ತೋರಿಸಿದ್ದಾರೆ.ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್‌ ಬಗ್ಗೆ ಏನೆಲ್ಲ ಮಾತಾಡಿಲ್ಲ.ನಮ್ಮ ಪಕ್ಷದಲ್ಲಿ ಇದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಏನೆಲ್ಲಾ ಮಾತನ್ನಾಡಿದ್ದಾರೆ ಎನ್ನುವುದನ್ನೂ ತೋರಿಸಬೇಕಿತ್ತು. ಅದನ್ನೆಲ್ಲ ಮರೆತಿದ್ದೀರಿ ಯಾಕೆ? ಎಂದು ಡಿಕೆಶಿಗೆ ತಿರುಗೇಟು ಕೊಟ್ಟರು ಕೇಂದ್ರ ಸಚಿವರು.
ಸಂಸತ್ತಿನಲ್ಲಿ ಡಿಎಂಕೆ ಜತೆ ಸರಿ ಮೇಕೆದಾಟು ಯೋಜನೆಗೆ ಕಾಂಗ್ರೆಸ್ ವಿರೋಧ
ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಕಾಂಗ್ರೆಸ್ ವರಸೆ ಹೇಗಿದೆ ಎಂದರೆ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತದೆ. ಅದೇ ದೆಹಲಿಗೆ ಬಂದಾಕ್ಷಣ ಡಿಎಂಕೆ ಜತೆ ಸೇರಿಕೊಂಡು ಈ ಯೋಜನೆಯ ವಿರುದ್ಧ ಗಲಾಟೆ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಡಿಸಿಎಂ ಒಂದು ವಿಷಯ ಪ್ರಸ್ತಾಪಿಸಿದ್ದಾರೆ.ಕೇಂದ್ರ ಸಚಿವರಾದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು ಎಂದು ನನ್ನ ಬಗ್ಗೆ ಹೇಳಿದ್ದರು. ನಾನು ಹೇಳಿದ್ದು, ನಿಮ್ಮ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ನಾಯಕರನ್ನು ಒಪ್ಪಿಸಿ. ಅದಾದ ಮೇಲೆ ಒಂದೇ ತಿಂಗಳಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದ್ದೆ. ಆದರೆ, ಕಾಂಗ್ರೆಸ್ ಇಬ್ಬಗೆಯ ನೀತಿ ಅನುಸರಿಸುತ್ತಾ ಕನ್ನಡಿಗರಿಗೆ ಮಂಕುಬೂದಿ ಎರಚುತ್ತಿದೆ ಎಂದು ಗುಡುಗಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ಅನ್ಆಟಗಳು ತಾಯಿ ಚಾಮುಂಡೇಶ್ವರಿ ಕರುಣೆ ಕಾರಣ. ನಿಮ್ಮದೇನೂ ಇಲ್ಲಿ ಇಲ್ಲ. ನಿಮಗೆ ಜನರಿಂದ ದುಡ್ಡು ಗುಂಜೋದಕ್ಕೆ ಸಮಯ ಇಲ್ಲ. ಸರಣಿ ಹಗರಣಗಳ ಮೂಲಕ ಲೂಟಿ ಹೊಡೆಯುತ್ತಿದ್ದೀರಿ ಎಂದು ಕೇಂದ್ರ ಸಚಿವರು ದೂರಿದರು.
ಕೆಆರ್ ಎಸ್ ಅಣೆಕಟ್ಟೆ ತುಂಬಿ ತಮಿಳುನಾಡಿಗೆ ನಿರರ್ಗಳವಾಗಿ ನೀರು ಹರಿದು ಹೋಯಿತು. ಆದರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೊಪ್ಪ ಸೇರಿದಂತೆ ಕೊನೆಯ ಭಾಗಕ್ಕೆ ನೀರು ಹೋಗಿಲ್ಲ.ನಿಮಗೆ ನಾಚಿಕೆ ಆಗಬೇಕು ಎಂದು ಅವರು ಟೀಕಾಪ್ರಹಾರ ನಡೆಸಿದರು.
ರಾಜ್ಯಸಭೆಯಲ್ಲಿ ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡುತ್ತಿದ್ದರೆ ನಿಮ್ಮ ಮಿತ್ರಪಕ್ಷ ಡಿಎಂಕೆ ಸದಸ್ಯರು ಗದ್ದಲ ಎಬ್ಬಿಸುತ್ತಾರೆ.ಆ ಸಮಯದಲ್ಲಿ ರಾಜ್ಯದವರೇ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕಾಂಗ್ರೆಸ್ ಸದಸ್ಯರು ಮೌನ ವಹಿಸುತ್ತಾರೆ.ಅವರು ಯಾಕೆ ದೇವೇಗೌಡರಿಗೆ ದನಿಗೂಡಿಸಲ್ಲ? ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಕೇಳುವ ನೀವು ಡಿಎಂಕೆ ಜತೆ ಕುಮ್ಮಕ್ಕಾಗಿ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಿರಿ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಜನ ಶಾಪ ಹಾಕುತ್ತಿದ್ದಾರೆ:
ನಮ್ಮ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದೆ.ರಾಜ್ಯ ಸರ್ಕಾರದ ನಡವಳಿಕೆಗಳು ಒಂದು ಒಂದಾಗಿಯೇ ಅನಾವರಣ ಆಗುತ್ತಿವೆ.ಸ್ವಚ್ಛ ಆಡಳಿತ ಕೊಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದರು.ಅಧಿಕಾರಕ್ಕೆ ಬಂದ ದಿನದಿಂದ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದರು ಎಂದು ಅವರು ಆರೋಪ ಮಾಡಿದರು.
ಕಾಂಗ್ರೆಸ್ ಸರ್ಕಾರ ಎಷ್ಟರ ಮಟ್ಟಿಗೆ ಹಗರಣಗಳಲ್ಲಿ ಮುಳುಗಿದೆ ಎಂದರೆ, ಜನ ಇವತ್ತು ಛೀ.. ಥೂ.. ಎಂದು ಹೃದಯದಿಂದ ಶಾಪ ಹಾಕುತ್ತಿದ್ದಾರೆ. ಸಿಎಂ ಅವರೇ ಹೇಳಿದ್ದಾರೆ 87 ಕೋಟಿ ಅಕ್ರಮ ನಡೆಸಿದೆ ಎಂದು. ಮುಡಾದಲ್ಲಿ ನಿವೇಶನ ತೆಗೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಸಂವಿಧಾನದ ಅಡಿ ಕೆಲಸ ಮಾಡಬೇಕು ಅವರು. ಆದರೆ ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂದರೆ, ಅವರ ಕುಟುಂಬವೇ ಅಕ್ರಮದಲ್ಲಿ ತೊಡಗಿದೆ.
ಸರ್ಕಾರಿ ಜಮೀನನ್ನು ಕಾನೂನುಬಾಹಿರವಾಗಿ ಪಡೆದಿರುವುದರ ವಿರುದ್ಧ ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಾನು ಹಿಂದುಳಿದ ವರ್ಗದವನು, ಅದಕ್ಕೆ ಇವರೆಲ್ಲ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿರುವುದಕ್ಕೆ ಕಿಡಿಕಾರಿದ ಅವರು; ಹಿಂದುಳಿದ ವರ್ಗದವರು ಎಂದು ನಾವು ನಿಮ್ಮ ವಿರುದ್ಧ ಹೋರಾಟ ಮಾಡುತ್ತಿಲ್ಲ. ಇನ್ನೂ ಒಮ್ಮೆ ಸಿಎಂ ಆಗಿ, ನಮ್ಮ ಅಭ್ಯಂತರವಿಲ್ಲ. ಹಿಂದುಳಿದ ವರ್ಗಕ್ಕೆ ಮಾತ್ರ ನೀವು ಸಿಎಂ ಆಗಿಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ ಎಂದು ಅವರು ಕಟುವಾಗಿ ಟೀಕಿಸಿದರು.
ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವವರ ರಕ್ಷಣೆ ಮಾಡುತ್ತಿದ್ದೀರಿ. ಅದನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ ಅಲ್ಲವೇ? SC/ST ಹಣ ಲೂಟಿ ಮಾಡಿ ಅಂಬೇಡ್ಕರ್ ಹೆಸರಿಗೆ ಕಳಂಕ ತಂದಿದ್ದು ಕಾಂಗ್ರೆಸ್‌ ಸರ್ಕಾರ ಅಲ್ಲವೇ?
ಈ ಬಗ್ಗೆ ಜನರಿಗೆ ತಿಳಿಸಲು ನಮ್ಮ ಹೋರಾಟ.
ಜನಾಂದೋಲನದ ಮೂಲಕ ನಿಮ್ಮ ತಪ್ಪು ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದ್ದೀರಿ.ಸುಖಾ ಸುಮ್ಮನೇ ವೈಯಕ್ತಿಕ ಟೀಕೆ, ಆರೋಪ ಮಾಡುತ್ತಿದ್ದೀರಿ ಎಂದು ಕೇಂದ್ರ ಸಚಿವರು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್ ಅಶೋಕ್, ಸಿ.ಟಿ.ರವಿ, ಡಾ.ಅಶ್ವಥ್ ನಾರಾಯಣ್ ಸೇರಿದಂತೆ ಎರಡೂ ಪಕ್ಷಗಳ ಅನೇಕ ನಾಯಕರು, ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು.